ಸಾರಾಂಶ
ಹೊಸಕೋಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೆನರಾ ಬ್ಯಾಂಕ್ ರೀಜನಲ್ ಸಹಾಯಕ ವ್ಯವಸ್ಥಾಪಕ ಮೋಹನ್ ಕುಮಾರ್ ತಿಳಿಸಿದರು.
ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಡ ಮಧ್ಯಮ ವರ್ಗದವರ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಯೋಜನೆಗಳನ್ನ ರೂಪಿಸಿದೆ. ಈ ಯೋಜನೆಗಳನ್ನ ಪಡೆದಂತಹ ಫಲಾನುಭವಿಗಳ ಜೊತೆ ಸಂವಾದ ಹಾಗೂ ಪಡೆಯದೆ ಇರುವಂತಹ ಫಲಾನುಭವಿಗಳಿಗೂ ಯೋಜನೆಗಳನ್ನು ತಲುಪಿಸಬೇಕೆಂಬ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.ಕಾರ್ಯಕ್ರಮದ ಮೂಲಕ ಫಲಾನುಭವಿಗಳ ಜೊತೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಸಂವಾದ ಮಾಡುವ ಕಾರ್ಯಕ್ರಮ ಇದಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಪ್ರತಿ ಮನೆಗೂ ತಲುಪಿಸಬೇಕು ಎನ್ನುವುದು ನರೇಂದ್ರ ಮೋದಿ ಅವರ ಕನಸು. ಆ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಬ್ಯಾಂಕುಗಳಿಂದ ನೇರ ಸಾಲ ನೀಡುವ ಯೋಜನೆಯನ್ನು ಆಯೋಜಿಸಿದೆ ಎಂದು ಹೇಳಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಕ್ರಮ: ಪ್ರಮುಖವಾಗಿ ಮುದ್ರಾ ಯೋಜನೆ, ಜನಧನ್ ಯೋಜನೆ, ಪಿಎಂ ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ, ಕೃಷಿ ಸನ್ಮಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನ ಎಲ್‌ಇಡಿ ಪರದೆಯ ವಾಹನದೊಂದಿಗೆ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶದಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕೆನರಾ ಬ್ಯಾಂಕ್ ರೀಜನಲ್ ಸಹಾಯಕ ವ್ಯವಸ್ಥಾಪಕ ಮೋಹನ್ ಕುಮಾರ್ ತಿಳಿಸಿದರು.ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯ ಕಿರು ಪುಸ್ತಕ ಹಾಗೂ 2024ರ ದಿನದರ್ಶಿಯನ್ನು ವಿತರಿಸಲಾಯಿತು.
ಬಾಕ್ಸ್.............ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭಾಗಿ
ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದಂತಹ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕೇಂದ್ರ ಉದ್ಯಮ ಶೀಲತೆ, ಕೌಶಲ್ಯಾಭಿವೃದ್ದಿ, ಎಲೆಕ್ಟ್ರಾನಿಕ್ಸ್ ಮತ್ತು ಟೆಕ್ನಾಲಜಿ ಇಲಾಖಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಪಾಲ್ಗೊಂಡಿದ್ದರು.ನವದೆಹಲಿಯಿಂದ ನೇರಪ್ರಸಾರ ಆದಂತಹ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರಧಾನಿ ನರೇಂದ್ರ ಮೋದಿ ಅವರ ಸಂವಾದ ಕಾರ್ಯಕ್ರಮವನ್ನು ಸಾರ್ವಜನಿಕರು ವೀಕ್ಷಿಸಲು ಬೃಹದಾಕಾರದ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಕೇಂದ್ರ ಸಚಿವ ರಾಜಿವ್ ಚಂದ್ರಶೇಖರ್ ಅವರು ಸಾರ್ವಜನಿಕರ ಜೊತೆಯಲ್ಲೆ ಕುಳಿತು ನರೇಂದ್ರ ಮೋದಿಯವರ ಸಂವಾದ ಕಾರ್ಯಕ್ರಮವನ್ನು ಸುಮಾರು 30 ನಿಮಿಷಗಳ ಕಾಲ ವೀಕ್ಷಣೆ ಮಾಡಿದರು. ನಂತರ ಆಯೋಜಕರಿಂದ ಗೌರವ ಸಮರ್ಪಣೆಯನ್ನು ಸ್ವೀಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಶುಭಾಶಯ ಕೋರಿದರು.
ಫೋಟೋ : 16 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕರ ಪತ್ರಗಳನ್ನ ಬಿಡುಗಡೆಗೊಳಿಸಲಾಯಿತು.
ಫೋಟೋ : 16 ಹೆಚ್‌ಎಸ್‌ಕೆ 2ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.