ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಶ್ರೀ ಬಾಲನಾಗಮ್ಮ, ಬಂಡೆ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಕಡಲೆಕಾಯಿ, ಅವರೆಕಾಯಿ ಮತ್ತು ಕಬ್ಬು ಪರಿಷೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ಶ್ರೀ ಬಾಲನಾಗಮ್ಮ ಬಂಡೆ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹಕ್ಕೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 6 ಗಂಟೆಯಿಂದಲೇ ಗಣ ಹೋಮ, ಆಂಜನೇಯ ಹೋಮ, ಶ್ರೀಯವರಿಗೆ ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಪರಿಷೆಗೆ ಆಗಮಿಸುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಪಂಚಮುಖಿ ಆಂಜನೇಯ ಟ್ರಸ್ಟ್ ವತಿಯಿಂದ ಕಡಲೆ ಕಾಯಿ, ಅವರೆಕಾಯಿ ಮತ್ತು ಕಬ್ಬು ಪರಿಷೆ ಅದ್ಧೂರಿಯಾಗಿ ಜರುಗಿತು. ಪರಿಷೆಗೆ ಸಹಸ್ರಾರು ಜನರು ಆಗಮಿಸಿದ್ದರು. ನಗರದ ವಿವಿಧೆಡೆಯಿಂದ ಜನರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ಪ್ರತಿಯೊಬ್ಬರಿಗೂ ತಲಾ ಒಂದು ಸೇರಿನಷ್ಟು ಕಡಲೆಕಾಯಿ, ಅವರೆಕಾಯಿ ಹಾಗೂ ಒಂದು ಕಬ್ಬಿನ ಜಲ್ಲೆಯನ್ನು ಉಚಿತವಾಗಿ ನೀಡಲಾಯಿತು. ಇದಕ್ಕಾಗಿ 2 ಟನ್ ಕಡಲೆ ಕಾಯಿ, 2 ಟನ್ ಅವರೆಕಾಯಿ ಹಾಗೂ 5 ಸಾವಿರ ಕಬ್ಬನ್ನು ತರಿಸಲಾಗಿತ್ತು. ದೇವಸ್ಥಾನ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ), ಸದಸ್ಯರಾದ ಶಿವಸ್ವಾಮಿ (ಅಪ್ಪಿ) ಮತ್ತಿತರರು ದೇವಾಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಗೂಳಿಗೌಡ ಮಾತನಾಡಿ, ಪಂಚಮುಖಿ ಆಂಜನೇಯ ಟ್ರಸ್ಟ್ ವತಿಯಿಂದ 3ನೇ ವರ್ಷದ ಕಡಲೆಕಾಯಿ, ಅವರೆಕಾಯಿ ಮತ್ತು ಕಬ್ಬು ಪರಿಷೆ ಆಯೋಜನೆ ಮಾಡಲಾಗಿದೆ. 5 ಸಾವಿರ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ನೀಡಲಾಗಿದೆ. ಈ ದೇವಸ್ಥಾನ ಪುರಾತನವಾದದ್ದು, 7 ವರ್ಷದ ಹಿಂದೆ ಪಂಚಮುಖಿ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದೇವು. ಗರುಡು ಪಕ್ಷಿ, ನಾಗರಾವು ಪ್ರದಕ್ಷಿಣೆ ಹಾಕಲು ಬರುತ್ತಲೇ ಇರುತ್ತದೆ ಎಂದು ಹೇಳಿದರು.ಟ್ರಸ್ಟ್ ನಿರ್ದೇಶಕ ಬೆಂಕಿ ನಾಗರಾಜು ಮಾತನಾಡಿ, ದಕ್ಷಿಣಾಭಿಮುಖವಾಗಿರುವ ಪಂಚಮುಖಿ ಆಂಜನೇಯಸ್ವಾಮಿ ಪ್ರತಿಷ್ಠಾನೆ ಮಾಡಿ 7 ವರ್ಷ ಆಗಿದೆ. ಬಾಲನಾಗಮ್ಮ ಬಂಡೆ ಮತ್ತು ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ತುಂಬಾ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷದಂತೆ ಟ್ರಸ್ಟ್ ನವರು ಸೇರಿ 5 ಸಾವಿರ ಜನರಿಗೆ ಕಡಲೆಕಾಯಿ, ಅವರೆಕಾಯಿ, ಕಬ್ಬು ನೀಡಲಾಗಿದೆ. ನಮ್ಮ ಸಾಂಪ್ರದಾಯಿಕತೆ ಉಳಿಸಬೇಕು ಎಂದು ತಿಳಿಸಿದರು.ಟ್ರಸ್ಟ್ ಅಧ್ಯಕ್ಷ ನಾರಾಯಣ, ಉಪಾಧ್ಯಕ್ಷ ಚಂದ್ರಣ್ಣ, ಧರ್ಮದರ್ಶಿ ವೆಂಕಟೇಶ್, ಮಹೇಶ್, ಗಿರಿ, ನಾರಾಯಣಪ್ಪ, ಜನಾರ್ದನ್, ನಿಂಗರಾಜು, ರಾಘವೇಂದ್ರ, ಚಂದ್ರು, ನರೇಶ್ ಮತ್ತಿತರರು ಹಾಜರಿದ್ದರು.-
14ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಶ್ರೀ ಬಾಲನಾಗಮ್ಮ ಬಂಡೆ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಕೆ.ಶೇಷಾದ್ರಿರವರು ಭಕ್ತರಿಗೆ ಕಡಲೆಕಾಯಿ, ಅವರೆಕಾಯಿ ಮತ್ತು ಕಬ್ಬು ವಿತರಿಸಿದರು.