ಕೊಡಗು ಪತ್ರಕರ್ತರ ಸಂಘ ಮತ್ತು ಪತ್ರಕತ೯ರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಆಯೋಜಿತವಾಗಿದ್ದ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಗ್ಗಿ ತಂಡವು ಸಿರಿ ತಂಡದ ವಿರುದ್ಧ ಜಯಗಳಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಪತ್ರಕರ್ತರ ಸಂಘ ಮತ್ತು ಪತ್ರಕತ೯ರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಆಯೋಜಿತವಾಗಿದ್ದ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಗ್ಗಿ ತಂಡವು ಸಿರಿ ತಂಡದ ವಿರುದ್ಧ ಜಯಗಳಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ, ಸೋಮವಾರಪೇಟೆ ತಹಸೀಲ್ದಾರ್ ಕೃಷ್ಣಮೂರ್ತಿ ನೇತೃತ್ವದ ಅಧಿಕಾರಿಗಳ ತಂಡವು, ಮಹೇಶ್ ಜೈನಿ ನಾಯಕತ್ವದ ಜನಪ್ರತಿನಿಧಿಗಳ ತಂಡದ ವಿರುದ್ಧ 45 ರನ್ ಗಳ ಅಂತರದ ಗೆಲವು ಗಳಿಸಿತು. ನಿತಿನ್ ಚಿಕ್ಕಿ ಆಲ್ ರೌಂಡರ್ ಆಟಗಾರನಾಗಿ ವಿಜೃಂಭಿಸಿದರೆ ಮಹೇಶ್ ಜೈನಿ ಬ್ಯಾಟಿಂಗ್, ಉದ್ಯಮಿ ಎಡಿಕೇರಿ ಪ್ರಸನ್ನ ಬೌಲಿಂಗ್ ನಲ್ಲಿ ಗಮನ ಸೆಳೆದರು.

ನಂತರ ಪತ್ರಕರ್ತರ ತಂಡಗಳಾದ ಸಿರಿ, ಸುಗ್ಗಿ, ಹೊನ್ನು ಮತ್ತು ಸಮೃದ್ಧಿ ತಂಡಗಳ ನಡುವೆ ಕ್ರಿಕೆಟ್ ಲೀಗ್ ಪಂದ್ಯಾಟ ಜರುಗಿತು. ಸುರೇಶ್ ಬಿಳಿಗೇರಿ ನಾಯಕತ್ವದ ಸುಗ್ಗಿ ತಂಡವು ಕುಡೆಕಲ್ ಸಂತೋಷ್ ನಾಯಕತ್ವದ ಸಿರಿ ತಂಡದ ವಿರುದ್ಧ 15 ರನ್ ಗಳ ಅಂತರದಿಂದ ಗೆಲವು ಸಾಧಿಸಿತು.

ಶ್ಲಾಘನೀಯ ಕಾರ್ಯ:

ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರ ಟಿ.ಪಿ. ರಮೇಶ್, ಅಗತ್ಯವುಳ್ಳ ಪತ್ರಕರ್ತರ ಆರೋಗ್ಯ ಸಮಸ್ಯೆಗೆ ಕಾಲದಿಂದ ಕಾಲಕ್ಕೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಕ್ಷೇಮಾಭಿವೃದ್ಧಿ ಸಮಿತಿಯು ಆರ್ಥಿಕ ಕ್ರೋಡೀಕರಣಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಸಂಘವು ಜಿಲ್ಲೆಯಾದ್ಯಂತ 4 ತಾಲೂಕು ಸಂಘಗಳ ಮೂಲಕ ಸಕ್ರಿಯ ಸದಸ್ಯರನ್ನೊಳಗೊಂಡು ಸ್ವಾಸ್ಥ್ಯ, ಸದೃಢ ಮತ್ತು ಸುಂದರ ಸಮಾಜ ನಿರ್ಮಾಣಕ್ಕಾಗಿ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಸಂಕ್ರಾಂತಿ ಹಿನ್ನಲೆಯಲ್ಲಿ ಸಂಕ್ರಾಂತಿ ಸಂಭ್ರಮವನ್ನು ಸಹಯಾರ್ಥ ಕ್ರಿಕೆಟ್ ಪಂದ್ಯಾಟದ ಮೂಲಕ ಯಶಸ್ವಿಯಾಗಿ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಲಾಗಿದೆ ಎಂದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಏಕೈಕ ಮಹಿಳಾ ಆಟಗಾರ್ತಿಯಾಗಿ ಮೈದಾನಕ್ಕಿಳಿದ ಚಂಪಾಗಗನ ಅವರನ್ನೂ ಅನಿಲ್ ಅಭಿನಂದಿಸಿದರು.

ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ವಿ. ರವಿಕುಮಾರ್ ಮಾತನಾಡಿ, ಸಂಘದ ಸದಸ್ಯರ ಹಿತಕ್ಕಾಗಿ ಮತ್ತು ಆರೋಗ್ಯ ಸಮಸ್ಯೆ ಕಾಡಿದಾಗ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕ್ಷೇಮಾಭಿವೃದ್ಧಿ ಸಮಿತಿ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲಾಗಿದೆ. ಕ್ರಿಕೆಟ್ ಪಂದ್ಯಾಟಕ್ಕೆ ಸದಸ್ಯರಿಂದ ಉತ್ತಮ ಸ್ಪಂದನ ದೊರಕಿದ್ದು, ದಾನಿಗಳೂ ಕೂಡ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಸಹಾಯ ನೀಡಿದ್ದಾರೆ ಎಂದು ಸ್ಮರಿಸಿದರು.

ಸಂಘವು ಕಬ್ಬಡಿ ಪಂದ್ಯಾಟ ಆಯೋಜಿಸಲಿ:

ಕೊಡಗು ಅಭಿವೃದ್ಧಿ ಸಮಿತಿಯ ಸಂಚಾಲಕ ದಾವೂದ್ ಮಾತನಾಡಿ, ಜನರಲ್ ತಿಮ್ಮಯ್ಯ ಮೈದಾನಕ್ಕೆ ಇನ್ನಾದರೂ ಸೂಕ್ತ ಕಾಯಕಲ್ಪದ ಅಗತ್ಯವಿದೆ. ಕ್ರೀಡಾಪಟುಗಳಿಗೆ ಈ ಕ್ರೀಡಾಂಗಣ ಮತ್ತಷ್ಟು ಸ್ಪೂರ್ತಿ ನೀಡುವ ತಾಣವಾಗಬೇಕು ಎಂದು ಕೋರಿದರು. ಮುಂದಿನ ದಿನಗಳಲ್ಲಿ ಕ್ರಿಕೆಟ್ ನಂತೆಯೇ ಸಂಘವು ಕಬ್ಬಡಿ ಪಂದ್ಯಾಟ ಆಯೋಜಿಸಲಿ ಎಂದೂ ದಾವೂದ್ ಸಲಹೆ ನೀಡಿದರು.

ಕೊಡಗು ಅಭಿವೃದ್ಧಿ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಸನ್ನ ಭಟ್, ಪತ್ರಕರ್ತರು ಸಮಾಜದ ಹಿತಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಶ್ಲಾಘಿಸಿದರು.

ಕೊಡಗು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಸಮಾಜಮುಖಿಯಾಗಿರುವ ಸದಸ್ಯರನ್ನೊಳಗೊಂಡ ಸಂಘವು ಜನಹಿತಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಮೆಚ್ಚತಕ್ಕದ್ದು ಎಂದರು.

ಸಂಘದ ನಿರ್ದೇಶಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಕ್ಷೇಮಾಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಕೂಗ್೯ ವಂದಿಸಿದರು. ಕಾರ್ಯಕ್ರಮದಲ್ಲಿ ಕೆ. ನಿಡಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ವೀಕ್ಷಕ ವಿವರಣೆಗಾರ ಅ್ಯರಿಸ್, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಎಸ್. ಹರೀಶ್ ಕುಮಾರ್, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಘ್ನೇಷ್ ಭೂತನಕಾಡು, ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಧೋಶ್ ಪೂವಯ್ಯ, ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜ್ ಕುಶಾಲಪ್ಪ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ತಾಂತ್ರಿಕ ಸಮಿತಿ ಸಂಚಾಲಕ ವಿನೋದ್ ಮೂಡಗದ್ದೆ ಉಪಸ್ಥಿತರಿದ್ದರು.

ಸಂಕ್ರಾಂತಿ ಸಂಭ್ರಮದ ಹಿನ್ನಲೆಯಲ್ಲಿ ಪಿ.ಎಂ. ರವಿ ಕಲ್ಪನೆಯಲ್ಲಿ ವೇದಿಕೆಯನ್ನು ಕಬ್ಬು, ಮಡಕೆ, ತೋರಣಗಳಿಂದ ವಿಶಿಷ್ಟವಾಗಿ ಅಲಂಕರಿಸಲಾಗಿತ್ತು. ಪಂದ್ಯಾಟದ ಅಂಪೈರ್ ಗಳಾಗಿ ರಮೇಶ್, ಸಚಿನ್, ಮಂಜು ಕಾರ್ಯನಿರ್ವಹಿಸಿದ್ದರು.

ಪ್ರಶಸ್ತಿ ವಿಜೇತರು:

ಪಂದ್ಯ ಪುರುಷೋತ್ತಮ ಮತ್ತು ಉತ್ತಮ ದಾಂಡಿಗ - ಸುಗ್ಗಿ ತಂಡದ ವಿವೇಕ್ ಮೋಗೇರ, ಉತ್ತಮ ಎಸೆತಗಾರ ಹೊನ್ನು ತಂಡದ ಮೋಹನ್ ರಾಜ್, ಉತ್ತಮ ಗೂಟ ರಕ್ಷಕ ಸಿರಿ ತಂಡದ ಹನೀಫ್, ಸರಣಿ ಪುರುಷೋತ್ತಮ - ಸಿರಿ ತಂಡದ ಖಲೀಲ್.