ರಾಮನಗರದಲ್ಲೂ ಸಂಭ್ರಮ ಸಡಗರದಿಂದ ಸಂಕ್ರಾಂತಿ ಹಬ್ಬ

| Published : Jan 16 2024, 01:45 AM IST

ಸಾರಾಂಶ

ಹೆಣ್ಣು ಮಕ್ಕಳು ಸಂಕ್ರಾಂತಿ ಎಳ್ಳು ಬೀರುವ ಮೂಲಕ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದರು. ಸಂಜೆ ವೇಳೆ ಸಿಂಗಾರಗೊಂಡಿದ್ದ ಮಕ್ಕಳು, ಅಕ್ಕ-ಪಕ್ಕದ ಮನೆಗೆ ತೆರಳಿ ಎಳ್ಳು ಕೊಡು,ಕೊಳ್ಳುವಿಕೆ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಸೋಮವಾರ ಆಚರಿಸಲಾಯಿತು. ನಗರಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿ ಸಡಗರ ಜೋರಾಗಿಯೇ ಕಂಡು ಬಂದಿತು.

ಹೆಣ್ಣು ಮಕ್ಕಳು ಸಂಕ್ರಾಂತಿ ಎಳ್ಳು ಬೀರುವ ಮೂಲಕ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದರು. ಸಂಜೆ ವೇಳೆ ಸಿಂಗಾರಗೊಂಡಿದ್ದ ಮಕ್ಕಳು, ಅಕ್ಕ-ಪಕ್ಕದ ಮನೆಗೆ ತೆರಳಿ ಎಳ್ಳು ಕೊಡು,ಕೊಳ್ಳುವಿಕೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.

ರಾಸುಗಳಿಗೆ ಸಿಂಗಾರ:

ಸಂಕ್ರಾಂತಿಯು ಸಮೃದ್ಧಿಯ ಸಂಕೇತ. ವರ್ಷ ಪೂರ್ತಿ ದುಡಿಯುವ ರಾಸುಗಳಿಗೆ ಗೌರವ ನೀಡುವ ಕೆಲಸವನ್ನು ರೈತಾಪಿ ವರ್ಗದವರು ಹಿಂದಿನ ಕಾಲದಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಹಾಗಾಗಿ ಭಾನುವಾರ ರಾಸುಗಳ ಮೈ ತೊಳಿದು, ಸಂಜೆಯ ವೇಳೆಗೆ ಊರ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಧನ ಹಾಗೂ ಹೋರಿಗಳನ್ನು ಕಿಚ್ಚು ಹಾಯಿಸಲಾಯಿತು.

ಇದಾದ ಬಳಿಕ ರೈತಾಪಿ ವರ್ಗದ ಸ್ನೇಹಿತನಾಗಿರುವ ಹಸು ಹಾಗೂ ಹೋರಿಗಳನ್ನು ಮನೆ ತುಂಬಿಸಿಕೊಳ್ಳಲಾಯಿತು. ರಾತ್ರಿಯ ವೇಳೆ ಊರಿನಲ್ಲಿ ಮೆರವಣಿಗೆ ಮಾಡಲಾಯಿತು. ಆ ಮೂಲಕ ಸಂಕ್ರಾಂತಿಯ ಸಂಭ್ರಮಕ್ಕೆ ಅಧಿಕೃತವಾಗಿ ತೆರೆ ಎಳೆಯಲಾಯಿತು.

ಮನೆಯಲ್ಲಿನ ಹೆಣ್ಣು ಮಕ್ಕಳು ಅಕ್ಕ-ಪಕ್ಕದ ಮನೆಗೆ ತೆರಳಿ, ಎಳ್ಳು ಬೀರುವ ದೃಶ್ಯ ಸಾಮಾನ್ಯವಾಗಿತ್ತು. ಸಿಂಗಾರಗೊಂಡಿದ್ದ ಹೆಣ್ಣು ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿದ್ದ ಎಳ್ಳು ಮತ್ತು ಕಬ್ಬನ್ನು ಮನೆ ಮನೆಗೆ ತೆರಳಿ, ವಿನಿಮಯ ಮಾಡಿಕೊಂಡ ದೃಶ್ಯ ಸಾಮಾನ್ಯವಾಗಿತ್ತು.

ಸೋಮವಾರ ಹಬ್ಬದ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವರ್ತಕರಿಗೆ ಕೊಂಚ ಮಟ್ಟಿಗೆ ನಿರಾಸೆ ವ್ಯಕ್ತವಾಗಿತ್ತು. ಇನ್ನು ಹಬ್ಬದ ದಿನವಾದ ಬೆಳಗ್ಗೆ ಸಾರಿಗೆ ಸಂರ್ಪಕಗಳಿಗೆ ಬೇಡಿಕೆ ಇತ್ತು. ಬೆಂಗಳೂರು ಹಾಗೂ ಮೈಸೂರಿನಿಂದ ಆಗಮಿಸಿದ್ದ ಜನತೆಗೆ, ಹಳ್ಳಿಗಳಿಗೆ ತೆರಳಲು ಕೊಂಚ ಕಷ್ಟವಾಗಿದೆ.

ಮೂರು ದಿನ ಹಬ್ಬ:

ಸೋಮವಾರ ಬಸವಣ್ಣ ಹುಟ್ಟಿದ ದಿನ ಎಂದು ಜಿಲ್ಲೆಯ ಕೆಲವು ಕಡೆ ರಾಸುಗಳನ್ನು ಕಿಚ್ಚಾಯಿಸಿಲ್ಲ. ಹಾಗಾಗಿ ಭಾನುವಾರ ಕೆಲವು ಕಡೆ ಕಿಚ್ಚಾಯಿಸಿದ್ದಾರೆ. ಸೋಮವಾರವೂ ಇದು ಮುಂದುವರೆದಿತ್ತು. ಮಂಗಳವಾರವೂ ರಾಸುಗಳನ್ನು ಜಿಲ್ಲೆಯಲ್ಲಿ ಕಿಚ್ಚಾಯಿಸಲಾಗುತ್ತದೆ.

-------------------------15ಕೆಆರ್ ಎಂಎನ್ 6.ಜೆಪಿಜಿ

ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಿರುವುದು.-----------------------------