ಸಂಕ್ರಾಂತಿ ಸಮೃದ್ಧಿ, ಸಂಸ್ಕೃತಿಯ ಸಂಕೇತ: ಡಾ.ಎಚ್.ಪಿ.ರಾಜು

| Published : Jan 20 2024, 02:02 AM IST

ಸಂಕ್ರಾಂತಿ ಸಮೃದ್ಧಿ, ಸಂಸ್ಕೃತಿಯ ಸಂಕೇತ: ಡಾ.ಎಚ್.ಪಿ.ರಾಜು
Share this Article
  • FB
  • TW
  • Linkdin
  • Email

ಸಾರಾಂಶ

‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ನಾಣ್ಣುಡಿಯೊಂದಿಗೆ ಈ ಹಬ್ಬದಲ್ಲಿ ಎಳ್ಳು-ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸರ್ವ ಜನಾಂಗದವರಿಗೂ ಉತ್ತಮ ಸಂದೇಶವನ್ನೂ ನೀಡಿದ್ದಾರೆ. ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯ ಭಾಗವಾಗಿರುವ ಸಂಕ್ರಾಂತಿಯ ಸಂಭ್ರಮವನ್ನು ಮುಂದುವರೆಸಿಕೊಂಡು ಹೋಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸುಗ್ಗಿ ಹಬ್ಬ ಸಂಕ್ರಾಂತಿ ಸಮೃದ್ಧಿಯ ಸಂಕೇತವಾಗಿದ್ದು, ರೈತರು ತಾವು ಬೆಳೆದ ದವಸ-ಧಾನ್ಯಗಳನ್ನು ರಾಶಿಮಾಡಿ ಪೂಜೆ ಸಲ್ಲಿಸುವ ಸಂಸ್ಕೃತಿಯನ್ನು ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಹಾಗಾಗಿ, ಇದು ನಮ್ಮ ಸಂಸ್ಕೃತಿಯ ಪ್ರತೀಕವೂ ಆಗಿದೆ ಎಂದು ಕಾವೇರಿ ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಚ್.ಪಿ.ರಾಜು ತಿಳಿಸಿದರು.

ತಾಲೂಕಿನ ಸುಂಡಹಳ್ಳಿ ಬಳಿಯಿರುವ ಕಾವೇರಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ರೈತಾಪಿ ಬಂಧುಗಳಿಗೆ, ಕೃಷಿಕರಿಗೆ ಮಹತ್ವದ ಹಬ್ಬ. ಹೊಲ,ಗದ್ದೆಗಳ ಬೆಳೆ ಫಸಲಾಗಿ, ದವಸ ಧಾನ್ಯಗಳು ಮನೆ ಸೇರಿ ಸುಗ್ಗಿಯ ಸಡಗರದಲ್ಲಿ ನರ್ತಿಸುವ ಸಂಭ್ರಮದ ಹಬ್ಬವೇ ಸಂಕ್ರಾಂತಿ ಎಂದು ನುಡಿದರು.

ಸಂಕ್ರಾಂತಿ ಹಬ್ಬವೆಂದರೆ ಹಳ್ಳಿಯ ಸಂಸ್ಕೃತಿ. ಗ್ರಾಮೀಣ ಜನರಿಗೆ ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ನೀಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ನೀಡುವ ಹಬ್ಬವಾಗಿದೆ, ವಿವಿಧ ಸಾಂಪ್ರದಾಯಿಕ, ಸಾಂಸ್ಕೃತಿಕ ಆಚರಣೆಗಳಿಗೂ ಈ ಹಬ್ಬ ಸಾಕ್ಷಿಯಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಂಕ್ರಾಂತಿಯ ಮಹತ್ವ ತಿಳಿದಿರುವುದಿಲ್ಲ. ಸಾಂಪ್ರದಾಯಿಕ ಎಳ್ಳು, ಬೆಲ್ಲ ವಿತರಿಸುವುದಷ್ಟನ್ನೇ ಅವರು ತಿಳಿದಿದ್ದಾರೆ. ಆದ್ದರಿಂದ ಸುಗ್ಗಿ ಹಬ್ಬದ ಮಹತ್ವ ತಿಳಿಸುವ ಸಲುವಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಪ್ರೊ.ಟಿ. ನಾಗೇಂದ್ರ ಮಾತನಾಡಿ, ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆದ ದವಸ-ಧಾನ್ಯಗಳನ್ನು ಭೂಮಿ ತಾಯಿಯ ವರಪ್ರಸಾದವೆಂದೇ ಭಾವಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಭೂಮಿ ತಾಯಿಗೆ, ಜಾನುವಾರುಗಳಿಗೆ ಗೌರವಿಸುವ ಹಬ್ಬವಾಗಿ ಸಂಕ್ರಾಂತಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ವೈಜ್ಞಾನಿಕವಾಗಿ ಸಂಕ್ರಮಣವೆಂದರೆ ಸೂರ್ಯ ತನ್ನ ಪಥವನ್ನು ಬದಲಿಸುವ ಮಹತ್ವದ ದಿನವಾಗಿದೆ ಎಂದು ತಿಳಿಸಿದರು.

ಜನಪದರಿಂದ ಸುಗ್ಗಿ ಹಬ್ಬ ಸಂಕ್ರಾಂತಿಗೆ ಹೆಚ್ಚು ಪ್ರಾಮುಖ್ಯತೆ ಬಂದಿದೆ. ಇದು ವರ್ಷದ ಮೊದಲನೇ ಹಬ್ಬವೂ ಆಗಿದ್ದು, ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ನಾಣ್ಣುಡಿಯೊಂದಿಗೆ ಈ ಹಬ್ಬದಲ್ಲಿ ಎಳ್ಳು-ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸರ್ವ ಜನಾಂಗದವರಿಗೂ ಉತ್ತಮ ಸಂದೇಶವನ್ನೂ ನೀಡಿದ್ದಾರೆ. ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯ ಭಾಗವಾಗಿರುವ ಸಂಕ್ರಾಂತಿಯ ಸಂಭ್ರಮವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಎ.ಎಸ್. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಮಂಜುನಾಥ್ ಇತರರು ಭಾಗವಹಿಸಿದ್ದರು.