ಮಠಗಳಿಂದ ಸಂಸ್ಕಾರ, ಶಿಕ್ಷಣದ ಅರಿವು

| Published : Apr 13 2025, 02:07 AM IST

ಸಾರಾಂಶ

ಮಾನವ ಧರ್ಮ ಶ್ರೇಷ್ಠ. ಮನುಷ್ಯರಲ್ಲಿ ದಯೆ, ಕರುಣೆ, ಸೌಹಾರ್ದತೆ ಇರಬೇಕು. ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ. ಯಾರ ಜೀವನದಲ್ಲಿ ತೊಂದರೆ ಮಾಡದೆ ಬದುಕಲು ಬಿಡಬೇಕು. ನಾವು ಜೀವನದಲ್ಲಿ ಏನು ಇಲ್ಲದೆ ಬದುಕಬಹುದು. ಆದರೆ, ಅನ್ನ ಕೊಡುವ ರೈತ ನಿಲ್ಲದೆ ಬದುಕಲು ಸಾಧ್ಯವಿಲ್ಲ.

ಕೊಪ್ಪಳ:

ಪ್ರತಿ ಗ್ರಾಮಗಳಲ್ಲಿ ಮಠಗಳಿದ್ದರೇ ಸಂಸ್ಕಾರ, ಸಾಹಿತ್ಯ ಮತ್ತು ಶಿಕ್ಷಣದ ಅರಿವು ಇರುತ್ತದೆ ಎಂದು ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಮಹ್ಮದ್ ನಗರದ ಬಳಿ ಇರುವ ನಗರಗಡ್ಡಿ ಮಠದಲ್ಲಿ ಜರುಗಿದ ನಗರಗಡ್ಡಿ ಶ್ರೀಶಾಂತ ಲಿಂಗೇಶ್ವರ ರಥೋತ್ಸವ ಬಳಿಕ ಧಾರ್ಮಿಕ ಸಭೆ ಉದ್ದೇಶಿಸಿ ಮಾತನಾಡಿದರು.

ಮಾನವ ಧರ್ಮ ಶ್ರೇಷ್ಠ. ಮನುಷ್ಯರಲ್ಲಿ ದಯೆ, ಕರುಣೆ, ಸೌಹಾರ್ದತೆ ಇರಬೇಕು. ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ. ಯಾರ ಜೀವನದಲ್ಲಿ ತೊಂದರೆ ಮಾಡದೆ ಬದುಕಲು ಬಿಡಬೇಕು. ನಾವು ಜೀವನದಲ್ಲಿ ಏನು ಇಲ್ಲದೆ ಬದುಕಬಹುದು. ಆದರೆ, ಅನ್ನ ಕೊಡುವ ರೈತ ನಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದರು.

ಮಕ್ಕಳಿಗೆ ದುಡಿದು ಬದುಕಲು ಕಲಿಸಬೇಕು. ಪ್ರಾಕೃತಿಯ ಮಡಿಲಲ್ಲಿ ನಡೆಯುವ ಈ ಜಾತ್ರೆ ಆದರ್ಶವಾಗಿದೆ. ಅನ್ನ ಕೊಡುವ ರೈತ, ದೇಶ ಕಾಯುವ ಯೋಧ. ಶಿಕ್ಷಣ ಕಲಿಸುವ ಶಿಕ್ಷಕ ಹಾಗೂ ವೈದ್ಯರು ದೇವರಾಗಿದ್ದಾರೆ ಎಂದರು.

ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆದವು. ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣಕುಮಾರ ಗಸ್ತಿ, ದೀಪಿಕಾ ಮಂಡ್ಯ ಜೋಡಿ ಹಾಸ್ಯ ಜನಮನ ಸೆಳೆಯಿತು. ಸಂಜೆ ಮಹಾ ರಥೋತ್ಸವ ಸಂಭ್ರಮದಿಂದ ಜರುಗಿತು.

ಧರ್ಮಸಭೆಯಲ್ಲಿ ಮೈನಳ್ಳಿ ಸಿದ್ದೇಶ್ವರ ಸ್ವಾಮೀಜಿ, ಕಂಪ್ಲಿಯ ಅಭಿನವ ಪ್ರಭು ಸ್ವಾಮೀಜಿ, ಕನಕಗಿರಿಯ ಡಾ. ಚನ್ನಮಲ್ಲ ಸ್ವಾಮೀಜಿ, ಉತ್ತಂಗಿ ಸೋಮಶಂಕರ ಸ್ವಾಮೀಜಿ, ಕುಕನೂರಿನ ಡಾ. ಮಹಾದೇವ ಸ್ವಾಮೀಜಿ, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯರು, ಸಂತೆ ಕಲ್ಲೂರಿನ ಮಹಾಂತ ಶಿವಾಚಾರ್ಯರು, ಹಗರಿಬೊಮ್ಮನಹಳ್ಳಿ ಹಾಲಸಿದ್ದೇಶ್ವರ ಸ್ವಾಮೀಜಿ, ಶಾಂತಲೀಂಗೇಶ್ವರ ಸ್ವಾಮೀಜಿ, ಕಂಪಸಾಗರದ ನಾಗಯ್ಯ ಸ್ವಾಮೀಜಿ ಸೇರಿದಂತೆ ಲಲಿತಾ ರಾಣಿ ರಂಗದೇವರಾಯಲು, ಕಾಂಗ್ರೆಸ್ ಮುಖಂಡ ಕೆ. ಎಂ. ಸೈಯದ್, ಪ್ರಭುರಾಜ ಪಾಟೇಲ್, ಶಿವಮೂರ್ತಿಯ್ಯ ಸ್ವಾಮಿ, ಕೆ. ರಾಮರಾವ್, ಕೆಂಚಪ್ಪ ಹಿಟ್ನಾಳ, ಶಿವಕುಮಾರ ನಗರ, ರೇಣುಕಮ್ಮ ರಾಟಿ, ಶೇಖರೆಪ್ಪ ಮುತ್ತೆನ್ನವರು, ಭೀಮೇಶಪ್ಪ ಬಿಳೆಭಾವಿ, ಕೆ. ವೆಂಕಟೇಶ ಉಪಸ್ಥಿತರಿದ್ದರು.