ಸಾರಾಂಶ
ಭದ್ರಾವತಿ ನಗರದ ಸಿದ್ಧಾರೂಢ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಕಥಾಮೃತ ಪಾರಾಯಣ ಹಾಗೂ ಶ್ರಾವಣ ಮಾಸದ ಪೌರ್ಣಿಮೆ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಸಮಾಜದಲ್ಲಿ ಮನುಷ್ಯ ರಾಕ್ಷಸ ಪ್ರವೃತ್ತಿ ಬೆಳೆಸಿಕೊಂಡಾಗ ಕ್ರೌರ್ಯ ಮೀರಿದ ಘಟನೆಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಉತ್ತಮ ಸಂಸ್ಕಾರ ಪ್ರತಿಯೊಬ್ಬರಿಗೂ ಅವಶ್ಯಕ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಅವರು ನಗರದ ಸಿದ್ಧಾರೂಢ ಆಶ್ರಮದಲ್ಲಿ ಆಯೋಜಿಸಲಾಗಿದ್ದ ೩೫ನೇ ವರ್ಷದ ಶ್ರಾವಣ ಮಾಸದ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಕಥಾಮೃತ ಪಾರಾಯಣ ಹಾಗೂ ಶ್ರಾವಣ ಮಾಸದ ಪೌರ್ಣಿಮೆ ಕಾರ್ಯಕ್ರಮ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಕಛೇರಿ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವುಗಳು ಉತ್ತಮ ಸಂಸ್ಕಾರ ರೂಢಿಸಿಕೊಳ್ಳಲು ಮಠ-ಮಂದಿರಗಳು ಹಾಗೂ ಗುರುಗಳ ಮಾರ್ಗದರ್ಶನ ಅಗತ್ಯವಿದೆ. ಉತ್ತಮ ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಲ್ಲವಾದಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ, ಕೊಲೆಯಂತಹ ಕ್ರೌರ್ಯ ಮೀರಿದ ಘಟನೆಗಳು ಮರುಕಳುಹಿಸುತ್ತವೆ ಎಂದರು.ವಿಧಾನ ಪರಿಷತ್ ಸದಸ್ಯರಾದ ಬಿಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿತ್ರದುರ್ಗ ಕಬೀರಾನಂದ ಆಶ್ರಮದ ಶ್ರೀ ಶಿವಾಲಿಂಗಾನಂದ ಸ್ವಾಮೀಜಿ ಮತ್ತು ಗೋಣಿಬೀಡು ಶೀಲ ಸಂಪಾದನಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ವಹಿಸಿದ್ದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಮಂಜುನಾಥ್, ಲಯನ್ಸ್ ಮಾಜಿ ಜಿಲ್ಲಾ ಗೌರ್‍ನರ್ ದಿವಾಕರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಸಿದ್ಧಾರೂಢ ಆಶ್ರಮದ ಉಪಾಧ್ಯಕ್ಷ ಜಿ.ಬೆನಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್ ವಿಜಯ್ ಕುಮಾರ್ ಮತ್ತು ನಿರ್ದೇಶಕರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.