ಸಾರಾಂಶ
ಸಂಸ್ಕೃತ ಭಾರತಿ ಕಾರ್ಯಾಲಯ ‘ಅಕ್ಷಯಂ’ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಚಿನ್ನದ ಬಿಸ್ಕತನ್ನು ಹಾಗೆಯೇ ಧರಿಸಲು ಆಗುವುದಿಲ್ಲ, ಅದನ್ನು ಆಭರಣವನ್ನಾಗಿ ಮಾಡಿ ಅಂದರೆ ಆ ಬಿಸ್ಕತ್ತಿಗೆ ಸಂಸ್ಕಾರವನ್ನು ಕೊಟ್ಟು ನಾವು ಹೇಗೆ ಧರಿಸುತ್ತೇವೆಯೋ ಹಾಗೆ, ಈ ಭಾಷೆಗಳಲ್ಲಿ ಅತಿ ಸಂಸ್ಕಾರಗೊಂಡ ಭಾಷೆ ಎಂದರೆ ಸಂಸ್ಕೃತ ಭಾಷೆ. ವಿದ್ವಾಂಸರ ನಿಕಷಕ್ಕೆ ಹೋಗಿ ಬಗ್ಗಿ, ತಗ್ಗಿ ತನ್ನನ್ನು ತಾನು ಸರಿ ಎನ್ನಿಸಿಕೊಂಡ ಭಾಷೆ ಸಂಸ್ಕೃತ. ಇದನ್ನು ಭಾರತೀಯರಾದ ನಾವು ಕಲಿಯಬೇಕು, ಇದರಲ್ಲಿರುವ ಜ್ಞಾನ ಭಂಡಾರವನ್ನು ತಿಳಿಯಬೇಕು ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.ಅವರು ಇಲ್ಲಿನ ಸಂಸ್ಕೃತ ಭಾರತಿ ಕಾರ್ಯಾಲಯ ‘ಅಕ್ಷಯಂ’ವನ್ನು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.ಮುಖ್ಯ ಅತಿಥಿಯಾಗಿದ್ದ ಸಂಸ್ಕೃತ ಭಾರತೀಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್, ವಿಶ್ವದ ಉದ್ದಗಲಕ್ಕೂ ಸಂಸ್ಕೃತ ಪ್ರೇಮ ಇರುವುದನ್ನು ವಿಸ್ತಾರವಾಗಿ ತಿಳಿಸುತ್ತಾ, ಭಾರತದಲ್ಲಿ ಸಂಸ್ಕೃತ ಭಾರತಿ ನಿರಂತರವಾಗಿ ಬೆಳೆಯುತ್ತಿರುವ ಸಂಘಟನೆ ಎಂದು ತಿಳಿಸಿದರು.
ದಾನಿಗಳು ಮತ್ತು ಲೇಖಕ ಗುರುಪ್ರಸಾದ್ ಭಟ್ ಅವರ ಪತ್ನಿ ಸುಪರ್ಣ ಭಟ್ ಉಪಸ್ಥಿತರಿದ್ದರು.ಸಂಜೆ ನಗರದ ಆರ್‌ಎಸ್‌ಎಸ್ ಕಾರ್ಯಾಲಯ ಕೇಶವ ನಿಲಯದಲ್ಲಿ ನಡೆದ ‘ಅಕ್ಷಯೋತ್ಸವ’ದಲ್ಲಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ, ಸಂಸ್ಕೃತದಿಂದಲೇ ಸಂಸ್ಕೃತಿ ಸಂಸ್ಕಾರ. ಸಂಸ್ಕೃತ ಎಲ್ಲ ಭಾಷೆಗಳ ಜನನಿ, ಭಾರತೀಯ ಭಾಷೆಗಳು ಸಂಸ್ಕೃತದಿಂದಲೇ ವಿಕಾಸಗೊಂಡಿವೆ ಎಂದರು.ಸಂಸ್ಕೃತ ಭಾರತೀಯ ದಿನೇಶ್ ಕಾಮತ್, ಸಂಸ್ಕೃತ ಭಾರತೀ ಜಿಲ್ಲಾ ಉಪಾಧ್ಯಕ್ಷ ಸುಧಾ ಶೆಣೈ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ದಾ.ಮ. ರವೀಂದ್ರ, ನಾರಾಯಣ ಶೆಣೈ, ನೂರಾರು ಸಂಸ್ಕೃತ ಕಾರ್ಯಕರ್ತರು, ಹಿತೈಷಿಗಳು ಅಕ್ಷಯೋತ್ಸವದಲ್ಲಿ ಉಪಸ್ಥಿತರಿದ್ದರು.