ಸಂಸ್ಕೃತ ನಮ್ಮ ದೇಶದ ಸನಾತನ ಭಾಷೆ ಎಂದು ಸಂಸ್ಕೃತ ಭಾರತಿ ಉತ್ತರ ಕರ್ನಾಟಕ ಪ್ರಾಂತದ ಅಧ್ಯಕ್ಷ ಜಿ.ಆರ್. ಅಂಬಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಂಸ್ಕೃತ ನಮ್ಮ ದೇಶದ ಸನಾತನ ಭಾಷೆ ಎಂದು ಸಂಸ್ಕೃತ ಭಾರತಿ ಉತ್ತರ ಕರ್ನಾಟಕ ಪ್ರಾಂತದ ಅಧ್ಯಕ್ಷ ಜಿ.ಆರ್. ಅಂಬಲಿ ಹೇಳಿದರು.ನಗರದ ನವನಗರ 61ನೇ ಸೆಕ್ಟರ್ ನಾಗಪ್ಪನಕಟ್ಟೆ ಸಮುದಾಯ ಭವನದಲ್ಲಿ ಸಂಸ್ಕೃತ ಭಾರತಿ ಕರ್ನಾಟಕ ಉತ್ತರಂ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಕೃತ ಸಂಭಾಷಣೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಸ್ಕೃತ ಕಠಿಣ ಭಾಷೆ ಎಂಬ ತಪ್ಪು ತಿಳಿವಳಿಕೆ ಅನೇಕರಲ್ಲಿದೆ. ಇದನ್ನುಅತ್ಯಂತ ಸರಳವಾಗಿ ಕಲಿಯಬಹುದು. ಸಂಸ್ಕೃತ ಭಾರತಿ ನಡೆಸುವ ಸಂಭಾಷಣೆ ಶಿಬಿರಗಳಿಂದ ಅನೇಕ ಮನೆಗಳು ಸಂಸ್ಕೃತ ಮನೆಗಳಾಗಿ ಪರಿವರ್ತನೆಯಾಗಿವೆ. ಮನೆಯ ಪ್ರತಿಯೊಬ್ಬ ಸದಸ್ಯರು ಸಂಸ್ಕೃತ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಸಂಸ್ಕೃತಕಲಿಯುವಂತೆ ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.ಮುಖ್ಯ ಅತಿಥಿಯಾಗಿದ್ದಡಾ.ಪ್ರಮೋದ ಮಿರ್ಜಿ ಮಾತನಾಡಿ, ಸಂಸ್ಕೃತ ಭಾರತದ ಆತ್ಮ. ಎಲ್ಲ ಭಾಷೆಗಳ ಜನನಿ.ಸಂಸ್ಕೃತ ಎಂದರೆ ಸಂಸ್ಕಾರ, ಸಂಸ್ಕೃತಿ, ಸನಾತನ. ವೇದ, ಉಪನಿಷತ್, ರಾಮಾಯಣ, ಮಹಾಭಾರತದಂಥ ಅಮೂಲ್ಯ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ. ಏಕತೆ ಹಾಗೂ ಸನಾತನ ಧರ್ಮರಕ್ಷಣೆ ಸಂಸ್ಕೃತದಿಂದ ಸಾಧ್ಯ. ಪ್ರತಿಯೊಬ್ಬರೂ ಸಂಸ್ಕೃತಕಲಿಯಲು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷ ರಾಮಸಿಂಗ್ ರಜಪೂತ ಮಾತನಾಡಿ, ಸಂಸ್ಕೃತ ಭಾಷೆಯಲ್ಲಿ ಅಪಾರ ಜ್ಞಾನವಿದ್ದು, ಜನಸಾಮಾನ್ಯರೂ ಈ ಭಾಷೆಯನ್ನು ಕಲಿಯಬಹುದಾಗಿದೆ ಎಂದು ಹೇಳಿದರು.ಪ್ರವೀಣ ಅಂಬಲಿ ಮಾತನಾಡಿ, ಸಂಸ್ಕೃತ ಶಿಕ್ಷಕರಿಗೆ ಸಾಕಷ್ಟು ಬೇಡಿಕೆಯಿದೆ. ಉತ್ತಮ ಸಂಬಳ ಕೂಡ ದೊರೆಯುತ್ತದೆ. ದೇವಭಾಷೆ ಕಲಿಯಲು ಇಚ್ಛಾಶಕ್ತಿ ತೋರಬೇಕು ಎಂದರು. ವಿಜಯಪುರದಿಂದ ಬಂದಿದ್ದ ನೀಲಕಂಠ ವಾಲಿಕಾರ, ಯುಟೂಬ್ ಮೂಲಕ ಸಂಸ್ಕೃತ ಭಾಷೆ ಪ್ರಚುರಗೊಳಿಸುತ್ತಿರುವ ವಿದ್ಯಾ ನಾಡಿಗ ಮಾತನಾಡಿದರು.
ರಮೇಶ ದಾಬಡೆ, ನಾರಾಯಣ ಪತ್ತಾರ, ಶ್ರೀಕಾಂತ ದೇಸಾಯಿ, ಯಲಗೂರೇಶ ಪಾಟೀಲ, ರೇಖಾ ಮಿಲಜಗಿ, ರಷ್ಮಿ ಪಾಟೀಲ, ಮಹಾದೇವಿ ಹೆಗಡೆ ಮತ್ತಿತರರು ಇದ್ದರು. ಗೌರಿ ಭೋಸಲೆ ಸಂಸ್ಕೃತ ಭಾಷೆಯಲ್ಲೇ ಕಾರ್ಯಕ್ರಮ ನಿರೂಪಿಸಿದರು.ನಗೆ ಸಂಭಾಷಣೆ, ಕಿರು ನಾಟಕ ಪ್ರದರ್ಶನ: ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷೆ ಶಾರದಾ ಕುಲಕರ್ಣಿ ಒಂದು ವಾರ ಶಿಬಿರ ನಡೆಸಿಕೊಟ್ಟರು. ಮಕ್ಕಳು, ಗೃಹಿಣಿಯರು ಸೇರಿ 50ಕ್ಕೂ ಅಧಿಕ ಜನ ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು. ನಂತರ ನಡೆಸ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು, ಹಿರಿಯರು ಸಂಸ್ಕೃತ ಭಾಷೆಯಲ್ಲೇ ನಗೆ ಸಂಭಾಷಣೆ, ಕಿರು ನಾಟಕ, ಹಾಡು, ಸುತ್ತಲಿನ ಪರಿಸರ, ಬಣ್ಣಗಳನ್ನು ಪರಿಚಯ ಮಾಡಿಕೊಟ್ಟು ಗಮನ ಸೆಳೆದರು.