ಸಾರಾಂಶ
ಸಂಸ್ಕೃತ ಅತ್ಯಂತ ಪ್ರಾಚೀನವಾದ ಭಾಷೆ. ತಾಯಿ ಭಾಷೆ ಇತರ ಭಾಷೆಗಳು ಸಂಸ್ಕೃತದ ಸತ್ವವನ್ನು ಪಡೆದುಕೊಂಡು ಹುಟ್ಟಿಕೊಂಡವು.
ಶಿರಸಿ: ತಾಲೂಕಿನ ಯಡಹಳ್ಳಿಯ ವಿದ್ಯೋದಯ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಸೆ. ೨೭ರಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಶ್ರೀ ಸೋಮೇಶ್ವರ ವೇದವಾಣಿ ಸಂಸ್ಕೃತ ಪಾಠಶಾಲಾ ಹಾಗೂ ವಿದ್ಯೋದಯ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಅಸ್ಮಾಕಂ ಸಂಸ್ಕೃತಂ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಆರ್.ವಿ. ಭಾಗ್ವತ್ ಸಿರ್ಸಿಮಕ್ಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತ ಅತ್ಯಂತ ಪ್ರಾಚೀನವಾದ ಭಾಷೆ. ತಾಯಿ ಭಾಷೆ ಇತರ ಭಾಷೆಗಳು ಸಂಸ್ಕೃತದ ಸತ್ವವನ್ನು ಪಡೆದುಕೊಂಡು ಹುಟ್ಟಿಕೊಂಡವು ಎಂದರು.
ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯದರ್ಶಿ ಜನಾರ್ದನ್ ಆಚಾರ್ಯ ಉಪನ್ಯಾಸ ನೀಡಿ, ಪ್ರಾಚೀನ ಸನಾತನ ಪರಂಪರೆ ನಾಡಿನಲ್ಲಿ ಇಷ್ಟಾದರೂ ಉಳಿದುಕೊಂಡಿದೆ ಎಂದರೆ ಅದಕ್ಕೆ ಆದಿಶಂಕರಾಚಾರ್ಯರೇ ಕಾರಣ ಎಂದರು. ಸೋಮೇಶ್ವರ ವೇದವಾಣಿ ಪ್ರಸಾರ ಸಭಾದ ಕಾರ್ಯದರ್ಶಿ ಎಸ್.ಆರ್. ಹೆಗಡೆ ಮಾತನಾಡಿ, ಸಂಸ್ಕೃತದಲ್ಲಿ ಎಲ್ಲವೂ ಇದೆ. ಇದು ಮೃತ ಭಾಷೆಯಲ್ಲ. ವಿಜ್ಞಾನ ತಂತ್ರಜ್ಞಾನ ಖಗೋಳ ಎಲ್ಲವೂ ಕರಾರುವಕ್ಕಾಗಿ ಬಹಳ ಹಿಂದೆಯೇ ಸಂಸ್ಕೃತ ಭಾಷೆಯಲ್ಲಿ ಮೂಡಿಸಲಾಗಿದೆ ಎಂದರು.ಪದವಿಪೂರ್ವ ಶಿಕ್ಷಣ ಮಂಡಳಿಯ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಟಿ. ಭಟ್ ಅವರನ್ನು ಸನ್ಮಾನಿಸಲಾಯಿತು. ಸೋಮೇಶ್ವರ ವೇದ ವಾಣಿ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷ ಎಂ.ವಿ. ಹೆಗಡೆ ಕಾನಗೋಡು ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಪಾಠಶಾಲೆಯ ಮುಖ್ಯಾಧ್ಯಾಪಕಿ ಶುಭಾ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಸಂಸ್ಕೃತ ಭಾಷೆಯ ಮಹತ್ವದ ಕುರಿತು ಅರಿವು ಮೂಡಿಸುವುದಕ್ಕಾಗಿ ಅಸ್ಮಾಕಂ ಸಂಸ್ಕೃತಂ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆ ಉಪನ್ಯಾಸ, ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಸ್ಪರ್ಧೆ ನಡೆಸುವುದು ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಸ್ಮಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.