ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಎಲ್ಲಾ ಭಾಷೆಗಳ ಮೂಲ ಬೇರು ಮತ್ತು ತವರು ಸಂಸ್ಕೃತವಾಗಿದೆ. ಯಾವುದೇ ಭಾಷೆ ಮಾತನಾಡಲು ಒಂದು ಪದದಿಂದ ಸಂಸ್ಕೃತ ಆರಂಭವಾಗುತ್ತದೆ ಎಂದು ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶ್ರೀಕಾಂತ್ ಪುರೋಹಿತ್ ಹೇಳಿದರು.ತಾಲೂಕಿನ ಚುಂಚನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅಸ್ಮಾಕಂ ಸಂಸ್ಕೃತಂ ಸಂಸ್ಕೃತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಂದು ಗ್ರಂಥಗಳ ಮೂಲ ಭಾಷೆ ಹಾಗೂ ಶಾಲೆಗಳಲ್ಲಿ ಹೇಳಿಕೊಡುವ ಭಗವದ್ಗೀತೆಯೂ ಕೂಡ ಸಂಸ್ಕೃತವಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ವರ್ತೂರು ಎಂಬ ಗ್ರಾಮದ ಪ್ರತಿಯೊಬ್ಬರೂ ಕೂಡ ಸಂಸ್ಕೃತವನ್ನೇ ಮಾತನಾಡುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಮಾತೃಭಾಷೆ ಜೊತೆಗೆ ಸಂಸ್ಕೃತ ಭಾಷೆಯನ್ನೂ ಕೂಡ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.ಸಂಸ್ಕೃತ ಭಾಷೆ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ನಾಥ ಶ್ರೀಗಳು ಮತ್ತು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಚುಂಚನಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮನೋಹರ ಮಾತನಾಡಿ, ಜಗತ್ತಿಗೆ ಶ್ರೇಷ್ಠತೆ ಕಲಿಸಿಕೊಟ್ಟ ದೈವಿಕ ಭಾಷೆಯಾಗಿರುವ ಸಂಸ್ಕೃತಕ್ಕೆ ಜರ್ಮನಿ ದೇಶವು ವಿಶೇಷ ಸ್ಥಾನಮಾನ ಮತ್ತು ಪ್ರಾಮುಖ್ಯತೆ ನೀಡುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಪಾಠಶಾಲೆ ಮುಖ್ಯಶಿಕ್ಷಕ ಡಾ.ಮಂಜುನಾಥ್ ಹೆಗ್ಗಡೆ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಸಂಸ್ಕೃತ ಮತ್ತು ಸಂಸ್ಕೃತಿಯ ವಿಶೇಷ ಬೆಳವಣಿಗೆ ಸದಾ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಶೋಭಾಯಾತ್ರೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಚುಂಚನಹಳ್ಳಿ ಗ್ರಾಪಂ ಅಧ್ಯಕ್ಷೆ ಎಲ್.ಎಸ್.ಉಷಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಸುನಂದ ಸೇರಿ ಹಲವರು ಇದ್ದರು.