ರಾಮನಗರ: ವೀರ ಸೇನಾನಿ ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯದ ಗುರುವಾಗಿದ್ದರು. ಎಲ್ಲರಿಗೂ ಏನೇ ಇದ್ದರು ಶಿಕ್ಷಣದ ಮುಂದೆ ಎಲ್ಲವೂ ಶೂನ್ಯ ಎಂಬ ಮಹತ್ವವನ್ನು ಸಾರಿದ ಮಹಾನ್ ದಾರ್ಶನಿಕರು ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎ.ಆರ್‌.ಗೋವಿಂದಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಕಂದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಸೇವಾ ಸಂಘ ಸಹಯೋಗದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ‌ ಜನಾಂಗದವರು ನಿಷ್ಠೆಯಿಂದ ಎಲ್ಲ ಜನಾಂಗವನ್ನು ಪ್ರೀತಿಸಿ, ಗೌರವಯುತ ಬದುಕು ನಡೆಸುವಂತೆ ಮಾರ್ಗದರ್ಶನ ನೀಡಿದವರು ಸಂತ ಸೇವಾಲಾಲ್ ಎಂದು ಗುಣಗಾನ ಮಾಡಿದರು.

ಜಿಲ್ಲಾ ಕೇಂದ್ರದಲ್ಲಿ ಬಂಜಾರ ಭವನಕ್ಕೆ ಮನವಿ ಸಲ್ಲಿಸಲಾಗಿದೆ‌. ಮುಂದಿನ ದಿನಗಳಲ್ಲಿ ಸಂತ ಸೇವಾ ಲಾಲ್ ಜಯಂತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಲಾಗುವುದು. ಇದಕ್ಕೆ ನಮ್ಮ‌ ಸಮುದಾಯ ಜಾಗೃತರಾಗುವ ಮೂಲಕ ಸಂಘಟನೆಯನ್ನು ಸದೃಢವಾಗಿ ಜಿಲ್ಲಾದ್ಯಂತ ಕಟ್ಟುವ ಕೆಲಸ ಮಾಡೋಣ ಎಂದು ಗೋವಿಂದಸ್ವಾಮಿ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ‌ ನಿರ್ದೇಶಕ ಡಾ.ಕೆ.ಸತೀಶ್ ಮಾತನಾಡಿ, ಬಂಜಾರ ಸಮುದಾಯದವರು ಶಿಕ್ಷಣಕ್ಕೆ ಮೊದಲ ಆದ್ಯತೆ‌ ನೀಡಬೇಕು. ಈಗಾಗಲೇ ಸರ್ಕಾರದ ಉದ್ಯೋಗದಲ್ಲಿರುವವರು ಸಮುದಾಯದ ಮಕ್ಕಳಲ್ಲಿ ಸ್ಪೂರ್ತಿ ತುಂಬುವ ಜೊತೆಗೆ ಸರ್ಕಾರಿ ಸೌಲಭ್ಯಗಳು, ಹಕ್ಕುಗಳನ್ನು ಪಡೆದು ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಬಂಜಾರ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಧನಂಜಯ್ಯ, ಸಮುದಾಯದ ಮುಖಂಡ ಸಿದ್ದಾನಾಯ್ಕ ಮಾತನಾಡಿದರು. ಸಮುದಾಯದ ಡಾ.ಎ.ಆರ್.ಗೋವಿಂದಸ್ವಾಮಿ, ಜಿ.ಕೃಷ್ಣಾನಾಯ್ಕ, ಸಿಂದ್ಯಾನಾಯ್ಕ, ಭಾನುಪ್ರಿಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಕೆಡಿಪಿ ಸದಸ್ಯ ಗುರುಮೂರ್ತಿ, ಶಿಕ್ಷಕ ಗೋವಿಂದಸ್ವಾಮಿ, ಬಂಜಾರ ಸೇವಾ ಸಂಘದ ಅಧ್ಯಕ್ಷೆ ವರಲಕ್ಷ್ಮಿ, ಸಮುದಾಯದ ಮುಖಂಡರಾದ ರಾಮ ದಾಸನಾಯ್, ಧನಂಜಯನಾಯ್ಕ, ಮೂರ್ತಿನಾಯ್ಕ, ಗಂಗಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.


ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರು, ವಾಟರ್ ಟ್ಯಾಂಕ್ ವೃತ್ತದಲ್ಲಿ ಜನಪದ ಕಲಾ ತಂಡಗಳು ಮತ್ತು ಬಂಜಾರ ನೃತ್ಯದೊಂದಿಗೆ ಮಹಿಳೆಯರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಕಂದಾಯ ಭವನದ ಆವರಣದಲ್ಲಿ ಸಮಾವೇಶಗೊಂಡಿತು.

ಕೋಟ್ ...

ಬಂಜಾರ (ಲಂಬಾಣಿ‌) ಸಮುದಾಯದ ಆಚಾರ-ವಿಚಾರಗಳು, ಉಡುಗೆ ತೊಡುಗೆಗಳು ಭಾರತೀಯ ಸಂಸ್ಕೃತಿ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ತಾವೆಲ್ಲರೂ ಸಂಘಟಿತರಾಗಿ ಅವುಗಳನ್ನು ಮುಂದಿನ ಸಮುದಾಯಕ್ಕೆ ಪರಿಚಯಿಸುವ ಅಗತ್ಯವಿದೆ. ನಿಮ್ಮ‌ ಬೇಡಿಕೆಯಾಗಿರುವ ಬಂಜಾರ ಭವನ ನಿರ್ಮಾಣ ಸಂಬಂಧ ಜಿಲ್ಲಾಡಳಿತದ ಗಮನ‌ ಸೆಳೆಯುತ್ತೇನೆ.

-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ

16ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ಬಂಜಾರ ನೃತ್ಯ ಕಲಾವಿದರೊಂದಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹಾಗೂ ಗಣ್ಯರು ಇರುವುದು.