ಪ್ರಸ್ತುತ ಸರ್ಕಾರದಿಂದ ಈ ಸ್ಥಳವನ್ನು ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿರುವ ಸಂದರ್ಭದಲ್ಲಿ, ಮೊದಲಿನಿಂದಲೂ ಇಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಮೊದಲ ಆದ್ಯತೆ ಆಧಾರದ ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡುವುದು ಅತ್ಯಂತ ನ್ಯಾಯಸಮ್ಮತವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಕೋಲಾರ

ನಗರದ ಸಂತೆ ಮೈದಾನ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಹಲವಾರು ವರ್ಷದಿಂದ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಮಳಿಗೆಗಳನ್ನು ಹಾಗೂ ಪರ್ಯಾಯ ಸ್ಥಳವನ್ನು ಒದಗಿಸುವಂತೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಅಂಗಡಿ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಗೆ ಮನವಿಸಲ್ಲಿಸಿದರು.

ನಂತರ ಓಂಶಕ್ತಿ ಚಲಪತಿ ಮಾತನಾಡಿ, ಕೋಲಾರದ ಸಂತೆ ಮೈದಾನ ಟಿ.ಚನ್ನಯ್ಯ ಮಾರುಕಟ್ಟೆ ಪ್ರದೇಶವು ನಗರದ ನಾಗರೀಕರಿಗೆ ತರಕಾರಿ ಮತ್ತು ದಿನಸಿ ವಸ್ತುಗಳ ಸರಬರಾಜಿಗೆ ಹಲವು ವರ್ಷಗಳಿಂದ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸ್ಥಳದಲ್ಲಿ ಸುಮಾರು ಮೂವತ್ತು ವರ್ಷದಿಂದ ವ್ಯಾಪಾರಿಗಳು ತಮ್ಮ ವಂಶಪಾರಂಪರ್ಯವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ನಂತರದ ಅವಧಿಯಲ್ಲಿ ಸುಮಾರು ೫ ಅಂಗಡಿಗಳ ವ್ಯಾಪಾರಿಗಳು ಕಳೆದ ೧೫ ರಿಂದ ೨೦ ವರ್ಷದಿಂದ ನಿರಂತರವಾಗಿ ವ್ಯಾಪಾರ ಮಾಡುತ್ತಾ ತಮ್ಮ ಕುಟುಂಬಗಳ ಜೀವನೋಪಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಪ್ರಸ್ತುತ ಸರ್ಕಾರದಿಂದ ಈ ಸ್ಥಳವನ್ನು ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿರುವ ಸಂದರ್ಭದಲ್ಲಿ, ಮೊದಲಿನಿಂದಲೂ ಇಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಮೊದಲ ಆದ್ಯತೆ ಆಧಾರದ ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡುವುದು ಅತ್ಯಂತ ನ್ಯಾಯಸಮ್ಮತವಾಗಿರುತ್ತದೆ ಎಂದರು.

ಅಭಿವೃದ್ಧಿ ಕಾಮಗಾರಿಗಳ ಅವಧಿಯಲ್ಲಿ ವ್ಯಾಪಾರಿಗಳಿಗೆ ಜೀವನೋಪಾಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಸಮೀಪದಲ್ಲೇ ಸೂಕ್ತ ಪರ್ಯಾಯ ಸ್ಥಳವನ್ನು ವ್ಯವಸ್ಥೆ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದು ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಮೊದಲ ಆದ್ಯತೆ ಆಧಾರದ ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು. ಜೊತೆಗೆ ಸಮೀಪದಲ್ಲೇ ಸೂಕ್ತ ಪರ್ಯಾಯ ಸ್ಥಳ ವ್ಯವಸ್ಥೆ, ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು ಎಂದು ತಿಳಿಸಿದರು.

ಸಂತೆ ಮೈದಾನ ತರಕಾರಿ ಮಾರಾಟ ಮಾಡುವವರ ಕ್ಷೇಮಾಬಿವೃದ್ಧಿ ಸಂಘದ ಅಧ್ಯಕ್ಷ ಜಬೀ, ಉಪಾಧ್ಯಕ್ಷ ಬಿ.ಎಂ.ಹರೀಶ್, ಕಾರ್ಯದರ್ಶಿ ಮುನಿಸ್ವಾಮಿ, ಸೈಯದ್ ಪರ್ವೀಜ್, ಗುಜ್ಜಾರ್ ಉಲ್ಲಾ ಷರೀಫ್, ಜಫಿಉಲ್, ಅರಿಫ್, ದೇವರಾಜ್, ಸೈಯದ್ ರಫೀಕ್, ಸುನಿಲ್, ನಾಗವೇಣಿ, ಮುನಿರತ್ನಮ್ಮ, ಸುಶೀಲಮ್ಮ, ನಾರಾಯಣಮ್ಮ, ಬಿಜೆಪಿ ಮುಖಂಡರಾದ ನಾಮಲ್ ಮಂಜುನಾಥ್, ಸಾ.ಮಾ.ಅನಿಲ್ ಬಾಬು, ಮಹೇಶ್ ಇದ್ದರು.