ಸಾರಾಂಶ
ಅಯೋಧ್ಯೆಯಲ್ಲಿ ನಡೆದ ರಾಷ್ಟ್ರಮಟ್ಟದ ಸಂಸ್ಕೃತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಂತೆಕೆಲ್ಲೂರು ಗ್ರಾಮದ ಕುಮಾರಿ ರಾಜೇಶ್ವರಿ ಮಹಾಂತಿನಮಠಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಸನ್ಮಾನಿಸಿ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಕಳೆದ ಏಪ್ರಿಲ್ ತಿಂಗಳಲ್ಲಿ ಅಯೋಧ್ಯೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಸಂಸ್ಕೃತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದ ಲಿಂಗಸುಗೂರು ತಾಲೂಕಿನ ಹಿರಿಯ ಪತ್ರಕರ್ತ ಘನಮಠದಯ್ಯ ಮಹಾಂತಿನ ಮಠ ಇವರ ಸುಪುತ್ರಿ ರಾಜೇಶ್ವರಿ ಮಹಾಂತಿನಮಠಗೆ ಜೂ.24ರಂದು ಬೆಂಗಳೂರಿನ ರಾಜ ಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಸನ್ಮಾನಿಸಿ ಗೌರವಿಸಿದರು.ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ರಾಜ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಸ್ಕೃತ ಅಧ್ಯಯನದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ಸಂಸ್ಕೃತ ಅಧ್ಯಯನ ಗ್ರಂಥಗಳ ಅನಾವರಣ ಸಮಾರಂಭ ಆಯೋಜಿಸಲಾಗಿತ್ತು. ಜನವರಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಾಹಿತ್ಯ ವಿಭಾಗದ ಕಾವ್ಯ ಕಂಠ ಪಾಠದಲ್ಲಿ ಪ್ರಥಮ ಸ್ಥಾನ ಪಡೆದು ಮಾರ್ಚ ತಿಂಗಳಲ್ಲಿ ಅಯೋಧ್ಯೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಕೂಡಾ ಪ್ರಥಮ ಸ್ಥಾನ ಪಡೆದಿದಿರುವ ರಾಜೇಶ್ವರಿಯನ್ನು ನವದೆಹಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಶ್ರೀನಿವಾಸ ವರಖೇಡಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದರು.
ಬೆಂಗಳೂರಿನ ಶುಭಂ ಕರೋತಿ ಮೈತ್ರೀಯ ಗುರುಕುಲದಲ್ಲಿ ಸಂಸ್ಕೃತ ಅಧ್ಯಯನ ಮಾಡುತ್ತಿರುವ ಕು.ರಾಜೇಶ್ವರಿ ಲಿಂಗಸಗೂರಿನ ಸುದ್ದಿಮೂಲ ಪತ್ರಿಕೆ ವರದಿಗಾರ ಘನಮಠದಯ್ಯ ಮಹಾಂತಿನಮಠ ಅವರ ಪುತ್ರಿಯಾಗಿದ್ದು, 5ನೇ ತರಗತಿಯಿಂದ ಸಂಸ್ಕೃತ ವಿದ್ಯಾರ್ಜನೆಗೆ ಸೇರ್ಪಡೆಯಾಗಿ ಪ್ರಸಕ್ತ ವರ್ಷ ಪಿಯುಸಿ ದ್ವೀತಿಯ ವರ್ಷದ ಸಂಸ್ಕೃತ ಯುನಿರ್ವಸಿಟಿ ಪಿಯುಸಿ ಪರೀಕ್ಷೆಯಲ್ಲಿ 4ನೇ ರ್‍ಯಾಂಕ ಗಳಿಸಿದ ಗ್ರಾಮೀಣ ಪ್ರತಿಭೆಯಾಗಿದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.