ಸಾರಾಂಶ
ಪ್ರತಿ ಬಾರಿ ವೇತನ ಆಯೋಗದ ವರದಿ ಶಿಫಾರಸು ಜಾರಿ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ ಎಂದು ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿ ಬಾರಿ ವೇತನ ಆಯೋಗದ ವರದಿ ಶಿಫಾರಸು ಜಾರಿ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ ಎಂದು ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ 7ನೇ ವೇತನ ಆಯೋಗದ ವರದಿಯಿಂದ ನಿವೃತ್ತ ಸರ್ಕಾರಿ ನೌಕರರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 6ನೇ ವೇತನ ಆಯೋಗ ಜಾರಿ ಸಂದರ್ಭದಲ್ಲಿಯೂ ನಿವೃತ್ತ ನೌಕರರಿಗೆ ಅನ್ಯಾಯವಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ 7ನೇ ವೇತನ ಆಯೋಗ ಶಿಫಾರಸುಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್. ಬೈರಪ್ಪ ಮಾತನಾಡಿ, ಜುಲೈ 2022ರಿಂದ ರಿಂದ ಜುಲೈ 31ರ 2024ರ ಅವಧಿಯಲ್ಲಿ ಒಟ್ಟು 17,963 ಸರ್ಕಾರಿ ನೌಕರರು ನಿವೃತ್ತರಾಗಿದ್ದಾರೆ. ಈ ನೌಕರರು 7ನೇ ವೇತನ ಆಯೋಗದ ಪರಿಷ್ಕೃತ ವೇತನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇದರ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಆದ್ದರಿಂದ 7ನೇ ವೇತನ ಅಯೋಗ ಆದೇಶ ಪುನರ್ ಪರಿಶೀಲಿಸಿ ಪರಿಷ್ಕೃತ ಆದೇಶ ನೀಡಬೇಕು. ನಿವೃತ್ತ ನೌಕರರಿಗೂ ಎಲ್ಲ ಯೋಜನೆ ವಿಸ್ತರಿಸಬೇಕೆಂದು ಆಗ್ರಹಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ ರಾಜ್ಯ ಸಂಚಾಲಕರಾದ ಅಶೋಕ ಎಂ. ಸಜ್ಜನ್, ಗುರು ತಿಗಡಿ, ಶಂಕರಪ್ಪ ಲಮಾಣಿ, ರಾಜ್ಯ ಮಹಾಪ್ರಧಾನ ಸಂಚಾಲಕ ಷಣ್ಮುಖಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.