ಚಿಬ್ಬಲಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಹಳಿಯಾಳವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟವಾದ ಗುರಿ ಹೊಂದಿರಬೇಕು. ಆ ಗುರಿಯನ್ನು ಸಾಧಿಸಲು ನಿರಂತರ ಪರಿಶ್ರಮ ಹಾಗೂ ಸಮಯದ ಸದ್ಭಳಕೆ ಅತ್ಯಗತ್ಯ. ಜ್ಞಾನಾರ್ಜನೆಯ ಮೂಲಕ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬದುಕನ್ನು ಸಾರ್ಥಕಗೊಳಿಸಬೇಕು ಎಂದು ಹಳಿಯಾಳ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಮಹಾದೇವಿ ಚೌಗುಲಾ ಹೇಳಿದರು.
ತಾಲೂಕಿನ ಚಿಬ್ಬಲಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಅಭ್ಯಾಸದ ಮೂಲಕ ತನ್ನ ಭವಿಷ್ಯ ರೂಪಿಸಕೊಳ್ಳಬೇಕು ಎಂದರು.ಪ್ರೌಢಶಾಲೆಗೆ ಹೊಸದಾಗಿ ಸೇರ್ಪಡೆಯಾದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸಸಿ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಶಾಲೆಯ ಶಿಕ್ಷಕ ವೃಂದದವರು ಗುಲಾಬಿ ಹೂ ನೀಡಿ ಸ್ವಾಗತಿಸಿ, ಶುಭ ಹಾರೈಸಿದರು.
ಇದೇ ಕಾರ್ಯಕ್ರಮದಲ್ಲಿ ನನ್ನ ಕಲಿಕೆ-ನನ್ನ ಗುರಿ ಎಂಬ ವಿಶೇಷ ಚಟುವಟಿಕೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳನ್ನು ಬರೆದು ನೋಟಿಸ್ ಬೋರ್ಡ್ ಮೇಲೆ ಅಂಟಿಸುವ ಮೂಲಕ ತಮ್ಮ ಕನಸುಗಳನ್ನು ಬಹಿರಂಗಪಡಿಸಿದರು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಸಿಹಿ ಭೋಜನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಿಂದಿ ಶಿಕ್ಷಕ ಅಶ್ಪಾಕಅಲಿ ಮುಲ್ಲಾ, ವಿಜ್ಞಾನ ಶಿಕ್ಷಕ ಸಿದ್ದಪ್ಪ ಬಿರಾದಾರ್, ಗಣಿತ ಶಿಕ್ಷಕ ಉದಾಸಿರ ಮೋಹಿತೆ, ಶಾಲಾ ಸಿಬ್ಬಂದಿ ಕೊರವರ ಸೇರಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.ಶಾಲೆಯ ಮುಖ್ಯೋಧ್ಯಾಪಕ ನಾರಾಯಣ ಬಾಬ್ರಿ ಹಾಗೂ ಇಂಗ್ಲಿಷ್ ಶಿಕ್ಷಕ ನಿಜಲಿಂಗಪ್ಪ ಬಡಿಗೇರ ಹಾಗೂ ವಿಶ್ವನಾಥ ಕಾರ್ಯಕ್ರಮ ನಿರ್ವಹಿಸಿದರು.