ಶರಣ ಎಂದರೆ ಜ್ಞಾನಿ ಎಂದರ್ಥ: ಪ್ರೊ. ವೀರಣ್ಣ

| Published : Feb 08 2024, 01:35 AM IST

ಸಾರಾಂಶ

ಹಳಕಟ್ಟಿಯವರು ಷಟ್‌ಸ್ಥಲದ ರಚನೆಗೆ ಆಧುನಿಕತೆಯನ್ನು ತಂದಿದ್ದಾರೆ, 36 ಹಂತಗಳ ಸಾಂಪ್ರದಾಯಿಕ ವಚನಗಳ ಹೊಂದಿಸುವಿಕೆಯ ಕ್ರಮವನ್ನು ಮುರಿದು ಬದಲಿಗೆ ವಚನಗಳನ್ನು ಸರಳವಾಗಿ ಆರು ಹಂತಗಳಾಗಿ ವರ್ಗೀಕರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

“ವಚನ ಸಾಹಿತ್ಯಕ್ಕೆ ಜೀವಕೊಟ್ಟ ಕೃತಿಯಂದರೆ ಫ.ಗು. ಹಳಕಟ್ಟಿಯವರ ವಚನ ಶಾಸ್ತ್ರ ಸಾರ” ಎಂದು ಕಲಬುರಗಿಯ ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ವೀರಣ್ಣ ದಂಡೆ ಹೇಳಿದರು.

ಸಿಯುಕೆಯಲ್ಲಿ ಬಸವ ಪೀಠ ಆಯೋಜಿಸಿದ್ದ ವಚನ ಶಾಸ್ತ್ರ ಸಾರ ಕೃತಿಯ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಪುಸ್ತಕದ ಕುರಿತು ಮಾತನಾಡಿದ ಅವರು, “ಈ ಕೃತಿಯು ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಮೇಲೆ ಗಾಢವಾದ ಪರಿಣಾಮ ಬೀರಿದೆ. ಇದರಿಂದಾಗಿ ಆರ್.ಆರ್. ದಿವಾಕರರು, ಸಿ.ಸಿ. ಬಸವನಾಳರು, ಅ.ನ.ಕೃ., ಎಂ.ಆರ್.ಶ್ರೀ., ಬಿಎಂಶ್ರೀ ಹೀಗೆ ಕನ್ನಡದ ಮಹಾನ್‌ ಸಾಹಿತಿಗಳು ಈ ಕೃತಿಯಿಂದ ಬಹಳ ಪ್ರಭಾವಿತರಾಗಿದ್ದರು ಎಂದರು.

ಹಳಕಟ್ಟಿಯವರ ಷಟ್‌ಸ್ಥಲದ ವಿಶ್ಲೇಷಣೆಯ ಬಗ್ಗೆ ಮಾತನಾಡಿ, “ಹಳಕಟ್ಟಿಯವರು ಷಟ್‌ಸ್ಥಲದ ರಚನೆಗೆ ಆಧುನಿಕತೆಯನ್ನು ತಂದಿದ್ದಾರೆ, 36 ಹಂತಗಳ ಸಾಂಪ್ರದಾಯಿಕ ವಚನಗಳ ಹೊಂದಿಸುವಿಕೆಯ ಕ್ರಮವನ್ನು ಮುರಿದು ಬದಲಿಗೆ ವಚನಗಳನ್ನು ಸರಳವಾಗಿ ಆರು ಹಂತಗಳಾಗಿ ವರ್ಗೀಕರಿಸಿದ್ದಾರೆ. ಅದು ಓದುಗರಿಗೆ ತುಂಬಾ ಸುಲಭವಾಗಿದೆ. ಅಲ್ಲದೆ ತಪ್ಪಾಗಿದ್ದ ವಚನಗಳನ್ನೂ ತಿದ್ದಿ ಸರಿಪಡಿಸಿದ್ದಾರೆಂದರು.

ಆ‍ಧ್ಯಾತ್ಮಿಕತೆಯು‍ಳ್ಳ ಮತ್ತು ಉಳ್ಳವರು ಶಿವಾಲಯ ಮಾಡುವವರು ನಾನೇನು ಮಾಡಲಯ್ಯ ಎನ್ನುವಂತೆ ದೇವರ ನಿಜವಾದ ಕಲ್ಪನೆಯುಳ್ಳವನು. ಅವರ ಪ್ರಕಾರ ಶರಣ ಎಂದರೆ ಜ್ಞಾನಿ ಎಂದರ್ಥ. ಅದಕ್ಕೆ ಅವರು ಜ್ಞಾನಿಯ ಲಕ್ಷಣಗಳನ್ನು ನೀಡುತ್ತಾರೆ. ಐಕ್ಯ ಎಂದರೆ ಯಾವುದು ನನ್ನದಲ್ಲ ಎಂಬ ಸ್ಥಿತಿ ಮುಟ್ಟುವುದಾಗಿದೆ. ಹೀಗೆ ಹಳಕಟ್ಟಿಯವರು ಷಟ್‌ಸ್ಥಲದ ಕಲ್ಪನೆಯನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಅರ್ಥೈಸಿದ್ದಾರೆ ಮತ್ತು ಸರಿಯಾದ ವಚನಗಳನ್ನು ಅಲ್ಲಿ ಜೋಡಿಸಿದ್ದಾರೆ ಎಂದು ವೀರ‍ಣ್ಣ ದಂಡೆ ಹೆಳಿದರು.

ಬಸವರಾಜ ಡೋಣೂರ ಮಾತನಾಡಿ, “ಸಮಗ್ರ ವಚನ ಸಾಹಿತ್ಯ ಎಲ್ಲರಿಗೂ ಮುಟ್ಟಬೇಕೆಂಬುದೇ ಅವರ ಪ್ರಮುಖ ಆಶಯವಾಗಿತ್ತು ಎಂದರು.

ಕುಲಸಚಿವ ಆರ್.ಆರ್. ಬಿರಾದಾರ ಅವರು, ಹಳಕಟ್ಟಿಯವರ ಸಾಹಿತ್ಯ ಕಾರ್ಯಕ್ಕೆ ಅವರಿಗೆ ಜ್ಞಾನಪೀಠ ನೀಡಬೇಕಾಗಿತ್ತು ಎಂದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಇಂದಿನ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ವಚನ ಸಾಹಿತ್ಯ ಆಧಾರಿತ ಮಾನವೀಯ ವಿಶ್ವವಿದ್ಯಾಲಯ ಪ್ರಾರಂಭಿಸಿ ಆ ನಿಟ್ಟಿನಲ್ಲಿ ಕಾರ್ಯ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.

ಸಮಾರಂಭದಲ್ಲಿ ವಿಕ್ರಮ ವಿಸಾಜಿ, ಬಸವ ಪೀಠದ ಸಂಯೋಜಕ ಡಾ. ಗಣಪತಿ ಬಿ ಸಿನ್ನೂರ, ಎಂ.ಎಸ್. ಪಾಸೋಡಿ, ಲಿಂಗಾಯತ ಮಹಾ ಸಭಾದ ಅಧ್ಯಯಕ್ಷ ಪ್ರಭುಲಿಂಗ ಮಹಾಗಾಂವಕರ್, ನಳಿನಿ ಮಹಾಗಾಂವಕರ್, ಆವ್ಹಾನಿತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.