ನೀಲಿ ಬಾನಲ್ಲಿ ಸಾರಂಗ್ ಹೆಲಿಕಾಪ್ಟರ್ ಗಳ ಹಾರಾಟ..!

| Published : Sep 26 2025, 01:00 AM IST

ಸಾರಾಂಶ

ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿರುವ ವೈಮಾನಿಕ ಪ್ರದರ್ಶನದ ಪೂರ್ವಭಾವಿಯಾಗಿ ಗುರುವಾರ ಸಂಜೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಾರಂಗ್ ಹೆಲಿಕಾಪ್ಟರ್‌ ಡಿಸ್ ಪ್ಲೇ ತಂಡವು ನಡೆಸಿದ 20 ನಿಮಿಷಗಳು ರಿಹರ್ಸಲ್ ಮಕ್ಕಳಿಂದ ಹಿರಿಯರವರೆಗೆ ಮೆಚ್ಚುಗೆ ಪಾತ್ರವಾಯಿತು.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನ ನೀಲಿ ಬಾನಲ್ಲಿ ಸಾರಂಗ್ ಹೆಲಿಕಾಪ್ಟರ್ ಗಳ ಹಾರಾಟವು ನೆರೆದಿದ್ದ ಸಾವಿರಾರು ಜನರ ಮೈಮನವನ್ನು ರೋಮಾಂಚನಗೊಳಿಸಿತು.

ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿರುವ ವೈಮಾನಿಕ ಪ್ರದರ್ಶನದ ಪೂರ್ವಭಾವಿಯಾಗಿ ಗುರುವಾರ ಸಂಜೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಾರಂಗ್ ಹೆಲಿಕಾಪ್ಟರ್‌ ಡಿಸ್ ಪ್ಲೇ ತಂಡವು ನಡೆಸಿದ 20 ನಿಮಿಷಗಳು ರಿಹರ್ಸಲ್ ಮಕ್ಕಳಿಂದ ಹಿರಿಯರವರೆಗೆ ಮೆಚ್ಚುಗೆ ಪಾತ್ರವಾಯಿತು.

ಕೆಂಪು, ಬಿಳಿ ಬಣ್ಣದ ಮಧ್ಯೆ ನವಿಲಿನ (ಸಾರಂಗ್) ಚಿತ್ರಣ ಹೊಂದಿದ್ದ 5 ಹೆಲಿಕಾಪ್ಟರ್ ಗಳು ಸಾಲಾಗಿ ಬಿಳಿ ಹೊಗೆ ಸೂಸುತ್ತಾ ಮೈದಾನದತ್ತ ಆಗಮಿಸಿದವು. ಕಿವಿಗಿ ಗಿಜುಗೂಡುವ ಸಂಗೀತದ ನಡುವೆಯೂ ನೆರೆದಿದ್ದ 10 ಸಾವಿರಕ್ಕೂ ಹೆಚ್ಚಿನ ಜನ ಶಿಳ್ಳೆ, ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

3 ಹೆಲಿಕಾಪ್ಟರ್ ಗಳು ಒಂದರದ ಹಿಂದೆ ಒಂದರಂತೆ ನೇರವಾಗಿ ಸಾಗಿದರೇ ಉಳಿದ ಎರಡು ಹೆಲಿಕಾಪ್ಟರ್ ಗಳು ಅಕ್ಕಪಕ್ಕ ಸಾಗುತ್ತಾ ಬಿಳಿ ಹೊಗೆ ಸೂಸಿದವು. ಡಾಲ್ಫಿನ್‌ಲೀಫ್‌, ಡೈಮಂಡ್‌, ವೈನ್‌ಗ್ಲಾಸ್‌, ಲೆವೆಲ್‌ಕ್ರಾಸ್‌, ಗ್ರಾಂಡ್‌ಫಿನಾಲ್‌, ಏರೊ ಹೆಡ್‌, ಕ್ರಾಸ್‌ಒವರ್‌ಬ್ರೇಕ್‌, ಹೃದಯ ಆಕೃತಿಗಳನ್ನು ಕೆಂಪು ಮತ್ತು ಬಿಳಿ ಹೊಗೆಯಲ್ಲಿ ಮೂಡಿಸಿದವು.

ಉಲ್ಟಾ ಮಾದರಿಯಲ್ಲಿ 4 ಹೆಲಿಕಾಪ್ಟರ್ ಸಾಗುತ್ತಿದ್ದಂತೆ 1 ಹೆಲಿಕಾಪ್ಟರ್ ಮಾತ್ರ ಕೆಂಪು ಹೊಗೆಯೊಂದಿಗೆ ಮಧ್ಯೆ ಬರುವ ಮೂಲಕ ರಂಜಿಸಿತು. ಇನ್ನೂ ಹೆಲಿಕಾಪ್ಟರ್ ಗಳ ಸಮೀಪದ ಫಾರ್ಮೇಶನ್ ಹಾರಾಟಗಳು, ಉಸಿರು ಬಿಗಿಸುವ ಸಾಹಸಗಳು ನೆರೆದಿದ್ದ ಪ್ರೇಕ್ಷಕರನ್ನು ಕೆಲವು ಕ್ಷಣ ಮೈ ರೋಮಾಂಚನಗೊಳಿಸಿತು.

ಸಾರಂಗ್ ತಂಡದಲ್ಲಿ 6 ಹೆಲಿಕಾಪ್ಟರ್ ಗಳು ಆಗಮಿಸಿದ್ದು, 5 ಹೆಲಿಕಾಪ್ಟರ್ ಗಳು ಮಾತ್ರ ಪ್ರದರ್ಶನಲ್ಲಿ ಪಾಲ್ಗೊಂಡಿದ್ದವು. 10 ಪೈಲೆಟ್ ಗಳು ಪ್ರದರ್ಶನ ನಡೆಸಿಕೊಟ್ಟರು. ಗ್ರೂಪ್‌ಕ್ಯಾಪ್ಟನ್‌ಎಸ್‌.ಕೆ. ಮಿಶ್ರ ಮುನ್ನಡೆಸಿದರು. ಮೈಸೂರು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ, ಮತ್ತೆ ಅಲ್ಲೇ ಲ್ಯಾಂಡ್ ಆದವು. ಸಾರಂಗ್ ತಂಡದಲ್ಲಿ ಒಟ್ಟು 25 ಸದಸ್ಯರು ಇದ್ದಾರೆ. ಈ ತಂಡವು ಸೆ.27ರ ಸಂಜೆ ಅಂತಿಮ ವೈಮಾನಿಕ ಪ್ರದರ್ಶನ ನೀಡಲಿವೆ.

ಸಾರಂಗ್ ತಂಡದ ಅಧಿಕಾರಿ ಪಲ್ಲವಿ ಸಂಗವನ್ ಅವರು, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ನಿರೂಪಣೆಯು ಮೈದಾನದಲ್ಲಿ ನೆರೆದಿದ್ದವರ ಗಮನ ಸೆಳೆಯಿತು.ಪಟಾಕಿ ಸಿಡಿಸಿ ಹಕ್ಕಿಗಳನ್ನು ಓಡಿಸಿದರು

ರಿಹರ್ಸಲ್ ಗೂ ಮುನ್ನ ಬನ್ನಿಮಂಟಪ ಮೈದಾನ ಸುತ್ತಾ 4 ದಿಕ್ಕುಗಳಲ್ಲೂ ಪಟಾಕಿ ಸಿಡಿಸುವ ಮೂಲಕ ಹಕ್ಕಿಗಳನ್ನು ಓಡಿಸಲಾಯಿತು. ಆದರೂ ಹೆಲಿಕಾಪ್ಟರ್ ಗಳ ಹಾರಾಟ ವೇಳೆ ಆಕಾಶದಲ್ಲಿ ಅಲ್ಲಲ್ಲಿ ಹದ್ದು ಸೇರಿದಂತೆ ವಿವಿಧ ಪಕ್ಷಿಗಳು ಹಾರುತ್ತಿದ್ದದ್ದು ಕಂಡು ಬಂತು.

ಏರ್ ಶೋ ಎಂದ ಕೂಡಲೇ ವಿಮಾನಗಳು ಹಾರಾಡುವುದನ್ನು ನೋಡಲು ಬಂದಿದ್ದ ಜನಕ್ಕೆ ನಿರಾಶೆ ಉಂಟಾಯಿತು. ಹೆಲಿಕಾಪ್ಟರ್ ಗಳ ಹಾರಾಟವನ್ನು ಮಾತ್ರ ಕಣ್ಣು ತುಂಬಿಕೊಂಡರು.ನಾಳೆ, ಅ.1 ರಂದು ವೈಮಾನಿಕ ಪ್ರದರ್ಶನ

ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಭಾರತೀಯ ವಾಯುಪಡೆ ವತಿಯಿಂದ ಸೆ.27 ಮತ್ತು ಅ.1 ರಂದು ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದೆ.

ಸೆ.27 ರಂದು ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್‌ ಡಿಸ್ ಪ್ಲೇ ತಂಡವು 5 ಹೆಲಿಕಾಪ್ಟರ್ ಗಳು ಪ್ರದರ್ಶನ ನೀಡಲಿದೆ. ಹಾಗೆಯೇ, ಅ.1 ರಂದು ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ 9 ಪೈಲಟ್ ಗಳು 9 ವಿಮಾನಗಳಲ್ಲಿ ವೈಮಾನಿಕ ಪ್ರದರ್ಶನ ನೀಡಲಿದ್ದಾರೆ.ಸಾರಂಗ್ ಡಿಸ್ ಪ್ಲೇ ತಂಡದಿಂದ ರಿಹರ್ಸಲ್ ಮಾಡಲಾಗಿದ್ದು, ಹೃದಯ ಆಕೃತಿ, ಡಾಲ್ಫಿನ್‌ಲೀಫ್‌, ಡೈಮಂಡ್‌, ವೈನ್‌ಗ್ಲಾಸ್‌, ಲೆವೆಲ್‌ಕ್ರಾಸ್‌, ಗ್ರಾಂಡ್‌ಫಿನಾಲ್‌, ಏರೊ ಹೆಡ್‌, ಕ್ರಾಸ್‌ಒವರ್‌ಬ್ರೇಕ್‌ಪ್ರದರ್ಶಿಸಲಾಗಿದೆ. ಸೆ.27ಕ್ಕೆ ಏರ್ ಶೋ ನಡೆಯಲಿದೆ. ಯುವ ಸಮೂಹವು ಏರ್‌ಫೋರ್ಸಿಗೆ ಸೇರಲು ಉತ್ತೇಜಿಸುವ ಉದ್ದೇಶ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ವೈಮಾನಿಕ ಪ್ರದರ್ಶನ ನೋಡಿ ರೋಮಾಂಚನಗೊಳ್ಳಿ.

- ಪಲ್ಲವಿ ಸಂಗವನ್, ಸಾರಂಗ್ ತಂಡದ ಅಧಿಕಾರಿ