ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಪ್ರೋತ್ಸಾಹಿಸಲು ಸರಸ್‌ ಮೇಳ-ಸಚಿವ ಎಚ್‌ಕೆ ಪಾಟೀಲ

| Published : Mar 02 2025, 01:21 AM IST

ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಪ್ರೋತ್ಸಾಹಿಸಲು ಸರಸ್‌ ಮೇಳ-ಸಚಿವ ಎಚ್‌ಕೆ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಶಿಲ್ಪಕಲೆ ಸಾಹಿತ್ಯವನ್ನು ಬಿಂಬಿಸುವಂತಹ ವೈಶಿಷ್ಠ್ಯ ಪೂರ್ಣ ಪ್ರದರ್ಶನ ಇದಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಶಿಲ್ಪಕಲೆ ಸಾಹಿತ್ಯವನ್ನು ಬಿಂಬಿಸುವಂತಹ ವೈಶಿಷ್ಠ್ಯ ಪೂರ್ಣ ಪ್ರದರ್ಶನ ಇದಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶನಿವಾರ ಗದಗ ನಗರದ ವಿ.ಡಿ.ಎಸ್.ಟಿ ಮೈದಾನದಲ್ಲಿ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನ ಹಾಗೂ ಜಿಲ್ಲಾ ಮಟ್ಟದ ಸರಸ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಬೆಳೆದ ಹೂವು ಮತ್ತು ಹಣ್ಣುಗಳ ಪ್ರದರ್ಶನ ಹಾಗೂ ಗ್ರಾಮೀಣ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಬೆಂಬಲ ನೀಡುವ ಉದ್ದೇಶದಿಂದ ಸರಸ್ ಮೇಳವನ್ನು ಸಹ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಪ ಶಾಸಕ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಕೃಷ್ಣ ಪರಾಪೂರ, ಉಪಾಧ್ಯಕ್ಷೆ ಶಕುಂತಲಾ ಅಕ್ಕಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಮುಂತಾದವರು ಪಾಲ್ಗೊಂಡಿದ್ದರು. ಫಲಪುಷ್ಪ ಪ್ರದರ್ಶನ:

ರಾಜ್ಯ ಸರ್ಕಾರದಿಂದ ಅನುಷ್ಠಾನಗೊಂಡ 5 ಗ್ಯಾರಂಟಿ ಯೋಜನೆಗಳಾದ ಯುವನಿಧಿ, ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದವು. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ಹೆಣ್ಣು ಮಕ್ಕಳನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿ ಎಂಬ ಸಂದೇಶ ಸಾರುತ್ತಿತ್ತು. ಪುಷ್ಪಗಳಿಂದ ಅಲಂಕೃತಗೊಂಡ ಸಬರಮತಿ ಆಶ್ರಮದ ಪ್ರತಿಕೃತಿ ಅದರಲ್ಲಿ ಸಿರಿಧಾನ್ಯದಿಂದ ತಯಾರಿಸಿದ ನನ್ನ ಜೀವನ ನನ್ನ ಸಂದೇಶ ಸಾರುವ ಗಾಂಧೀಜಿ ಪ್ರತಿಮೆ ದೇಶಭಕ್ತಿಯನ್ನು ಬಿಂಬಿಸುತ್ತಿತ್ತು.

ಕಲಾಕೃತಿಗಳು: ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ ಕಲಾಕೃತಿಗಳಾದ ಸಿದ್ದೇಶ್ವರ ಸ್ವಾಮಿಜಿ, ಪಂಡಿತ ಪುಟ್ಟರಾಜ ಗವಾಯಿ, ಆಲೂರು ವೆಂಕಟರಾಯರು, ಸುನೀಲ ಜೋಶಿ, ರತನಜಿ ಟಾಟಾ, ಕೆ.ಎಚ್.ಪಾಟೀಲ, ಸಾಲುಮರದ ತಿಮ್ಮಕ್ಕ, ಮಹಾತ್ಮಾ ಗಾಂಧೀ, ಹುಯಿಲಗೋಳ ನಾರಾಯಣರಾವ್, ಸಿದ್ಧನಗೌಡ ಪಾಟೀಲ, ಭೀಮಸೇನ ಜೋಶಿ, ಕುಮಾರವ್ಯಾಸ, ಗಂಗೂಬಾಯಿ ಹಾನಗಲ್, ಈ ಕಲಾಕೃತಿಗಳು ದೇಶದ ಸಂಗೀತ, ಕ್ರೀಡೆ, ಆಧ್ಯಾತ್ಮಿಕ, ಪರಿಸರ ಕ್ಷೇತ್ರದಲ್ಲಿನ ಸಾಧಕರನ್ನು ನೆನಪಿಸುತ್ತಿದ್ದವು. ಮರಳಿನಿಂದ ತಯಾರಿಸಿದ ಲಕ್ಕುಂಡಿಯ ಬ್ರಹ್ಮಜಿನಾಲಯ ಪ್ರತಿಕೃತಿ ಶಿಲ್ಪಕಲೆ ಸಾಹಿತ್ಯವನ್ನು ಬಿಂಬಿಸುತ್ತಿತ್ತು.ವಿವಿಧ ಪುಷ್ಪಗಳಿಂದ ತಯಾರಿಸಿದ ಐಪೆಲ್ ಟಾವರ್ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ಕಲಾಕೃತಿಗಳಾದ ಜಗಜ್ಯೋತಿ ಬಸವೇಶ್ವರ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್,ಗೌತಮ ಬುದ್ಧ ಕಲಾಕೃತಿಗಳು ಸಾರ್ವಜನಿಕರ ಕಣ್ಮನ ಸೆಳೆಯುತ್ತಿದ್ದವು.ಗಮನ ಸೆಳೆದ ತರಕಾರಿ: ಪಪ್ಪಾಯಿ, ನಿಂಬೆ, ದ್ರಾಕ್ಷಿ, ಚಿಕ್ಕು, ಹಲವು, ದಾಳಿಂಬೆ, ಬಳವಲಕಾಯಿ , ಗೋಡಂಬಿ, ಸೇಬು, ಅಂಜೂರು, ರಾಮಫಲ, ಬಾಳೆಹಣ್ಣು ಸೇರಿದಂತೆ ವಿವಿಧ ಫಲಗಳು ಹಾಗೂ ಕ್ಯಾಬೀಜ್, ಹಾಗಲಕಾಯಿ, ಮೆಣಸಿನಕಾಯಿ, ಟೊಮ್ಯಾಟೋ, ಕರಿಬೇವು, ಕುಂಬಳಕಾಯಿ ಸೇರಿದಂತೆ ವಿವಿಧ ತರಕಾರಿಗಳು ಈ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಕಂಡುಬಂದವು.ವಸ್ತು ಪ್ರದರ್ಶನ ಮಳಿಗೆಗಳು: ಸ್ವಸಹಾಯ ಗುಂಪಿನ ಮಹಿಳೆಯರು ಸಿದ್ಧಪಡಿಸಿದ ಕಾಟನ್ ಸೀರೆಗಳು, ಸಿದ್ದ ಉಡುಪುಗಳು, ಆಟಿಕೆ ಸಾಮಾನು, ಖಾರಾ ಮತ್ತು ಸಿಹಿ ತಿನಿಸು, ಅಗರಬತ್ತಿ, ಖಡಕ್ ಜೋಳದ ರೊಟ್ಟಿ, ಅಗಸಿ ಚಟ್ನಿ, ಅರಿಶಿನಪುಡಿ, ಶ್ಯಾವಿಗೆ, ಮಸಾಲಾ ಮಜ್ಜಿಗೆ, ಗೃಹ ಅಲಂಕಾರಿಕ ವಸ್ತುಗಳು, ಲಂಬಾಣಿ ಉಡುಪುಗಳು , ಇಳಕಲ್ ಸೀರೆ, ಚಕ್ಕುಲಿ , ಕೋಡುಬಳಿ, ನಿಪ್ಪಟ್ಟು, ಶೇಂಗಾ ಚಿಕ್ಕಿ, ಮೈಸೂರು ಪಾಕ್, ಹುಣಿಸೆ ಚಿಗಳಿ ಇವುಗಳ ಮಳಿಗೆಗಳು ಗ್ರಾಮೀಣ ಸೊಗಡನ್ನು ಬಿಂಬಿಸಿದವು.