ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವನೆ ಇರುವ ವ್ಯಕ್ತಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಸಂಘ ಸಂಸ್ಥೆಗಳಲ್ಲಿ ಅನಾವಶ್ಯಕವಾಗಿ ಗೊಂದಲಗಳಾಗುತ್ತಿವೆ. ಹೀಗಾಗಿ, ಸಂಘ ಸಂಸ್ಥೆಗಳಲ್ಲಿ ಸೇವಾ ಮನೋಭಾವದ ವ್ಯಕ್ತಿಗಳ ಅವಶ್ಯಕತೆ ಬಹಳ ಮುಖ್ಯ ಎಂದು ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ತಿಳಿಸಿದರು.ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಯೋಗಿ ನಾರೇಯಣ ಬಣಜಿಗ(ಬಲಿಜ) ಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರು ಮುಂದಿನ ಪೀಳಿಗೆಯ ಶಿಕ್ಷಣದ ಉದ್ದೇಶದಿಂದ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿ ವಸತಿ ಸೌಲಭ್ಯಗಳನ್ನು ನೀಡಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದರು. ಇಂದಿನ ಪರಿಸ್ಥಿತಿಯು ವಿಭಿನ್ನವಾಗಿದೆ ಎಂದರು.
ಸಣ್ಣ ವಿಷಯಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದರ ಮೂಲಕ ಸಂಘ ಸಂಸ್ಥೆಗಳ ಏಳಿಗೆ ಕುಂಠಿತವಾಗುತ್ತಿದೆ. ಸಂಘ- ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವಾಗ ವಿಶಾಲ ಮನೋಭಾವನೆಯನ್ನು ಬೆಳೆಸಿಕೊಂಡು, ಬಡ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯವನ್ನು ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕಿದೆ. ಆಗ ಸಂಘ ಸಂಸ್ಥೆಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.ಮಾಜಿ ಸಚಿವ ಡಾ. ಎಂ.ಆರ್. ಸೀತಾರಾಮ್ ರವರು ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಸಂಪೂರ್ಣ ಆರ್ಥಿಕ ಸಹಾಯ ನೀಡಿ ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಸಹಕರಿಸಿರುವುದನ್ನು ಶ್ಲಾಘಿಸಿದರು. 1953ರಲ್ಲಿ ಸ್ಥಾಪಿತವಾದ ಪುರುಷರ ವಿದ್ಯಾರ್ಥಿ ನಿಲಯ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಿ ಬದುಕು ಸಾಗಿಸಲು ಸಾಧ್ಯವಾಗಿದೆ. ಆದರೆ ಬಹಳ ಹಳೆಯದಾದ ಕಟ್ಟಡವು ಶಿಥಿವಾಗಿದ್ದು ಶೀಘ್ರವೇ ಕಾರ್ಯಕಾರಿ ಮಂಡಳಿಯ ಸದಸ್ಯರು ಸೀತಾರಾಮ್ ಅವರನ್ನು ಭೇಟಿ ಮಾಡಿ, ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಲಾಗುವುದು ಎಂದರು.
ಸಂಘದ ಅಧ್ಯಕ್ಷ ಎಂ. ನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಅಶಿಸ್ತಿನ ವರ್ತನೆ ಮಾಡಬಾರದು. ಹಿರಿಯರ ಶ್ರಮವನ್ನು ನೆನೆದು ಗೌರವಿಸುವ ಸಂಸ್ಕಾರವನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ ವಾರ್ಷಿಕ ವರದಿಯನ್ನು ಮಂಡಿಸಿದರು. ಉಪಾಧ್ಯಕ್ಷ ಜಿ . ರಮೇಶ್, ಖಜಾಂಚಿ ಕೆ. ಚಂದ್ರಶೇಖರ್, ಸಹ ಕಾರ್ಯದರ್ಶಿ ಚೆಲುವರಾಜ್, ಲೆಕ್ಕ ಪರಿಶೋಧಕ ಡಿ. ನಾಗರಾಜ್. ನಿವೃತ್ತ ಪ್ರಾಂಶುಪಾಲ ಎನ್. ವಿಜಯಕುಮಾರ್, ಸಂಘದ ನಿರ್ದೇಶಕರಾದ ಗೋವಿಂದರಾಜ್, ಎಚ್.ಕೆ. ಜಗನ್ನಾಥ್, ಕೆ.ಸಿ. ಪ್ರಕಾಶ್, ಎಚ್.ವಿ. ನಾಗರಾಜ, ಕೆ.ಎನ್. ವಿಜಯಕೊಪ್ಪ, ಡಾ.ಟಿ. ರಮೇಶ, ಡಾ.ಎಸ್. ಕೃಷ್ಣಪ್ಪ, ಬಿ.ಕೆ. ಸುರೇಶ್, ಗೋಪಾಲಕೃಷ್ಣ ಕುರಟ್ಟಿಹೊಸೂರು, ಕೆ. ಜನಾರ್ದನ್, ಎಂ.ಆರ್. ಗಿರೀಶ್, ಎ. ಚೆನ್ನಕೇಶವ, ಎಂ.ವಿ. ವೆಂಕಟೇಶ್, ವಿಶೇಷ ಆಹ್ವಾನಿತರಾದ ಪಾರ್ಥಸಾರಥಿ, ಆರ್. ಪಾಂಡುರಂಗ, ಟಿ.ಎಸ್. ರಮೇಶ್, ಎಂ.ನಾಗರಾಜ್, ಆರ್. ಬಾಲರಾಜು, ವ್ಯವಸ್ಥಾಪಕ ಎಚ್.ಆರ್. ವೆಂಕಟೇಶ್, ನಿಲಯಪಾಲಕ ಎಂ.ಸಿ. ರಘುಶೆಟ್ಟಿ ಇದ್ದರು.