ಭಾರತವನ್ನು ಏಕೀಕರಿಸುವಲ್ಲಿ ಸರ್ದಾರ್ ಪಟೇಲ್ ಪಾತ್ರ ಪ್ರಮುಖ: ಡಿವೈಎಸ್ಪಿ ಬಿ.ಚಲುವರಾಜು ಅಭಿಪ್ರಾಯ

| Published : Nov 01 2025, 01:45 AM IST

ಭಾರತವನ್ನು ಏಕೀಕರಿಸುವಲ್ಲಿ ಸರ್ದಾರ್ ಪಟೇಲ್ ಪಾತ್ರ ಪ್ರಮುಖ: ಡಿವೈಎಸ್ಪಿ ಬಿ.ಚಲುವರಾಜು ಅಭಿಪ್ರಾಯ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವನ್ನು ಫ್ರೆಂಚರು, ಬ್ರಿಟಿಷರು ಸೇರಿದಂತೆ ಹಲವು ಆಳಿದ್ದಾರೆ. ಮಹಾತ್ಮಗಾಂಧೀಜಿ ಸೇರಿದಂತೆ ಅನೇಕ ರಾಷ್ಟ್ರನಾಯಕರು ಸ್ವಾತಂತ್ರ್ಯ ಚಳವಳಿ ನಡೆಸಿದರು, ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದಲ್ಲಿ 500ಕ್ಕೂ ಹೆಚ್ಚು ರಾಜ ಸಂಸ್ಥಾನಗಳಿದ್ದವು. ಅವೆಲ್ಲವನ್ನೂ ಒಟ್ಟುಗೂಡಿಸಲು ಸರ್ದಾರ್ ವಲ್ಲಭಭಾಯಿ ಪಟೇಲ್ ಶ್ರಮಿಸಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ದೇಶದ ಮೊದಲ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತವನ್ನು ಏಕೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಡಿವೈಎಸ್‌ಪಿ ಬಿ.ಚಲುವರಾಜು ಹೇಳಿದರು.

ನಾಗಮಂಗಲ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನಾಚರಣೆ ಹಮ್ಮಿಕೊಂಡು ಶುಕ್ರವಾರ ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಮಂಡ್ಯ ಸರ್ಕಲ್ ವರೆಗೆ ಆಯೋಜಿಸಿದ್ದ ಏಕತೆಗಾಗಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತವನ್ನು ಫ್ರೆಂಚರು, ಬ್ರಿಟಿಷರು ಸೇರಿದಂತೆ ಹಲವು ಆಳಿದ್ದಾರೆ. ಮಹಾತ್ಮಗಾಂಧೀಜಿ ಸೇರಿದಂತೆ ಅನೇಕ ರಾಷ್ಟ್ರನಾಯಕರು ಸ್ವಾತಂತ್ರ್ಯ ಚಳವಳಿ ನಡೆಸಿದರು, ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದಲ್ಲಿ 500ಕ್ಕೂ ಹೆಚ್ಚು ರಾಜ ಸಂಸ್ಥಾನಗಳಿದ್ದವು. ಅವೆಲ್ಲವನ್ನೂ ಒಟ್ಟುಗೂಡಿಸಲು ಸರ್ದಾರ್ ವಲ್ಲಭಭಾಯಿ ಪಟೇಲ್ ಶ್ರಮಿಸಿದ್ದರು. ಹಾಗಾಗಿ ದೇಶಾದ್ಯಂತ ಇಂದು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಪೊಲೀಸರು ಯಾವುದೇ ಜಾತಿ, ಧರ್ಮ, ಭಾಷೆಗೆ ಸೀಮಿತವಾಗದೆ ನಾವೆಲ್ಲರೂ ಭಾರತೀಯರೆಂದು ಭಾವಿಸಿ ಮಾನವೀಯತೆ ಮೈಗೂಡಿಸಿಕೊಂಡು ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ಆಗ ಮಾತ್ರ ಉತ್ತಮ ಸೇವೆ ಸಲ್ಲಿಸಬಹುದು. ದೂರು ಕೊಡಲು ಠಾಣೆಗೆ ಬರುವ ಯಾವುದೇ ವ್ಯಕ್ತಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಒಳ್ಳೆಯ ರೀತಿಯಲ್ಲಿ ಮಾತನಾಡಿಸಿ, ಅವರ ಸಮಸ್ಯೆಗೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ನಾಗಮಂಗಲ ಪಟ್ಟಣ, ಗ್ರಾಮಾಂತರ, ಬೆಳ್ಳೂರು ಮತ್ತು ಬಿಂಡಿಗನವಿಲೆ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿ ಡಿವೈಎಸ್‌ಪಿ ಮತ್ತು ಸಿಪಿಐ ಅವರ ಜೊತೆಗೂಡಿ ಪಟ್ಟಣದ ಟಿ.ಬಿ.ಬಡಾವಣೆ ಬಿಜಿಎಸ್ ವೃತ್ತದಿಂದ ಮಂಡ್ಯ ಸರ್ಕಲ್ ವರೆಗೆ ಏಕತೆಗಾಗಿ ಓಟ ನಡೆಸಿದರು.

ಮಂಡ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ವೇಳೆ ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನನ್ನನ್ನು ನಾನು ಅರ್ಪಿಸಿಕೊಳ್ಳುತ್ತೇನೆ. ದೇಶ ಬಾಂಧವರಲ್ಲಿ ಈ ಸಂದೇಶವನ್ನು ಸಾರಲು ಶ್ರಮಿಸುತ್ತೇನೆಂದು ಡಿವೈಎಸ್‌ಪಿ ಚಲುವರಾಜು ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಈ ವೇಳೆ ಸಿಪಿಐ ಹೇಮಂತ್‌ಕುಮಾರ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಠಾಣೆ ಪಿಎಸ್‌ಐ ಬಿ.ರಾಜೇಂದ್ರ, ಬೆಳ್ಳೂರು ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್, ಬಿಂಡಿಗನವಿಲೆ ಠಾಣೆ ಪಿಎಸ್‌ಐ ಮಾರುತಿ ಸೇರಿದಂತೆ ನಾಲ್ಕು ಠಾಣೆಗಳ ಪೊಲೀಸ್ ಸಿಬ್ಬಂದಿ ಇದ್ದರು.