ದೇಶದ ಸ್ವಾತಂತ್ರ್ಯದ ನಂತರ ರಾಜ ಕುಟುಂಬದವರು ಕೂಡ ಸಣ್ಣ, ಸಣ್ಣ ಒಕ್ಕೂಟ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದರು.

ಹೊಸಪೇಟೆ: ಸ್ವತಂತ್ರ ಭಾರತವನ್ನು ಸರ್ದಾರ್‌ ವಲ್ಲಭಭಾಯಿ ಪಟೇಲ್ ಒಗ್ಗೂಡಿಸಿದರು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ರಾಷ್ಟ್ರೀಯ ಏಕತಾ ದಿವಸದ ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯದ ನಂತರ ರಾಜ ಕುಟುಂಬದವರು ಕೂಡ ಸಣ್ಣ, ಸಣ್ಣ ಒಕ್ಕೂಟ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದರು. ಹೈದರಾಬಾದ್ ನಿಜಾಮರು ಸೇರಿದಂತೆ ಅನೇಕ ರಾಜರು ಇದ್ದರು. ಚದುರಿದ ರಾಜ್ಯಗಳನ್ನು ಒಟ್ಟಿಗೆ ಸೇರಿಸಲು ಧೃಡ ನಿರ್ಧಾರ ಮಾಡಿ, ಅಖಂಡ ಭಾರತ ಮಾಡಿದ ಕೀರ್ತಿ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ಒಕ್ಕೂಟ ಅಂತ ಕರೆಯಲಾಗುತ್ತದೆ. ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯ್‌ ಪಟೇಲ್‌ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ಆ ಪ್ರಯುಕ್ತ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು ಎಂದರು.

ನಂತರ ನಗರದ ಡಾ.ಪುನೀತ್‌ ರಾಜಕುಮಾರ್ ವೃತ್ತದಿಂದ ಪ್ರಾರಂಭಗೊಂಡ ಮ್ಯಾರಥಾನ್ ಪುಣ್ಯಮೂರ್ತಿ ವೃತ್ತ, ಗಾಂಧಿಚೌಕ್‌, ದೊಡ್ಡ ಮಸೀದಿ, ಮದಕರಿ ನಾಯಕ ವೃತ್ತ, ವಾಲ್ಮೀಕಿ ವೃತ್ತ, ಮಾರ್ಕಂಡೇಶ್ವರ ದೇವಸ್ಥಾನದ ಮಾರ್ಗವಾಗಿ ಒಳಾಂಗಣ ಕ್ರೀಡಾಂಗಣಕ್ಕೆ ತಲುಪಿ ಮುಕ್ತಾಯಗೊಂಡಿತು.

ಜಿಪಂ ಸಿಇಒ ಅಕ್ರಂ ಷಾ, ಎಸ್ಪಿ ಎಸ್. ಜಾಹ್ನವಿ, ಎಎಸ್ಪಿ ಮಂಜುನಾಥ, ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ್, ಪಿಐಗಳಾದ ಲಖನ್ ಮಸುಗುಪ್ಪಿ, ಹುಲುಗಪ್ಪ ಮತ್ತಿತರರಿದ್ದರು.

ಹೊಸಪೇಟೆಯಲ್ಲಿ ರಾಷ್ಟ್ರೀಯ ಏಕತಾ ದಿವಸದ ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಮ್ಯಾರಥಾನ್‌ಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಚಾಲನೆ ನೀಡಿದರು.