ತಾಲೂಕಿನ ಸಾಸಲು ಗ್ರಾಮದಲ್ಲಿ ಕಳೆದ ಎರಡು ದಶಕಗಳಿಂದ ಸ್ಥಗಿತಗೊಂಡಿದ್ದ ಶ್ರೀ ಬನಶಂಕರಿ ಅಮ್ಮನವರು ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯವರ ಭವ್ಯ ಜಂಟಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. 27 ರಿಂದ ಜುಲೈ 2 ರವರೆಗೆ ಈ ಸೀಮೆಯಹಬ್ಬ ಅತ್ಯಂತ ವೈಭವದಿಂದ ಜರುಗಲಿದೆ ಎಂದು ದೇವಸ್ಥಾನ ಮಂಡಳಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಾಲೂಕಿನ ಸಾಸಲು ಗ್ರಾಮದಲ್ಲಿ ಕಳೆದ ಎರಡು ದಶಕಗಳಿಂದ ಸ್ಥಗಿತಗೊಂಡಿದ್ದ ಶ್ರೀ ಬನಶಂಕರಿ ಅಮ್ಮನವರು ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯವರ ಭವ್ಯ ಜಂಟಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. 27 ರಿಂದ ಜುಲೈ 2 ರವರೆಗೆ ಈ ಸೀಮೆಯಹಬ್ಬ ಅತ್ಯಂತ ವೈಭವದಿಂದ ಜರುಗಲಿದೆ ಎಂದು ದೇವಸ್ಥಾನ ಮಂಡಳಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.ವಿವಿಧ ಕಾರಣಗಳಿಂದಾಗಿ ಕಳೆದ 20 ವರ್ಷಗಳಿಂದ ನಿಂತುಹೋಗಿದ್ದ ಈ ಧಾರ್ಮಿಕ ಆಚರಣೆಯನ್ನು ಪುನರಾರಂಭಿಸಲು ಸೀಮೆಯ ಭಕ್ತರು ಹಾಗೂ ದೇವಾಂಗ ಮಂಡಳಿಯವರು ಒಮ್ಮತದ ತೀರ್ಮಾನ ಕೈಗೊಂಡಿದ್ದು, ಗ್ರಾಮದಲ್ಲಿ ಈಗಿನಿಂದಲೇ ಹಬ್ಬದ ವಾತಾವರಣ ಮನೆಮಾಡಿದೆ.
27 (ಶನಿವಾರ): ಶ್ರೀ ಆಂಜನೇಯ ಸ್ವಾಮಿಯವರಿಗೆ ಭಕ್ತಿಭಾವದ "ಬಿಲ್ಲುಗೂಡು ನೂರೊಂದೆಡೆ ಸೇವೆ " ನೆರವೇರಿಸುವ ಮೂಲಕ ಧಾರ್ಮಿಕ ಉತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ. 28 (ಭಾನುವಾರ) ರಾತ್ರಿ 8:30ಕ್ಕೆ ಸಾಂಪ್ರದಾಯಿಕ ಧ್ವಜಾರೋಹಣ ನೆರವೇರಲಿದ್ದು, ರಾತ್ರಿ 9:30ಕ್ಕೆ ಭಕ್ತರು ದಶಕಗಳಿಂದ ಕಾಯುತ್ತಿದ್ದ ಶ್ರೀದೇವಿ ಅಮ್ಮನವರು ಹಾಗೂ ಶ್ರೀ ಸ್ವಾಮಿಯವರ ಭವ್ಯ ಪ್ರಥಮೋತ್ಸವ ಸಡಗರದಿಂದ ಜರುಗಲಿದೆ. 29 (ಸೋಮವಾರ): ರಾತ್ರಿ ಶ್ರೀದೇವಿ ಅಮ್ಮನವರಿಗೆ ನಯನಮನೋಹರ ಅಶ್ವವಾಹನೋತ್ಸವ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯವರಿಗೆ ವೃಷಭ ವಾಹನೋತ್ಸವ ನಡೆಯಲಿದೆ. 30 (ಮಂಗಳವಾರ): ದೇವತೆಗಳಿಗೆ ಗಂಗಾಸ್ನಾನ ಮತ್ತು ಮುಡಿಯು ಸೇವೆ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಅಗ್ನಿಕುಂಡೋತ್ಸವ ಜರುಗಲಿದೆ. ಅಂದು ರಾತ್ರಿ 10:30ಕ್ಕೆ ಚಿಕ್ಕನಾಯಕನಹಳ್ಳಿ ಹಾಗೂ ಹಿಂಡಿಸ್ಕೆರೆ ದೇವಾಂಗ ಮಂಡಳಿಯವರಿಂದ ವೀರಗಾರಿಕೆ ಸೇವೆ ಸಮರ್ಪಣೆಯಾಗಲಿದ್ದು, ರಾತ್ರಿ 11:30ಕ್ಕೆ ಚಿಕ್ಕ ರಥೋತ್ಸವ ಜರುಗಲಿದೆ.ಜುಲೈ 1 (ಬುಧವಾರ): ಮಧ್ಯರಾತ್ರಿ 2:30ಕ್ಕೆ ಚಿಕ್ಕನಾಯಕನಹಳ್ಳಿ ಮಂಡಳಿಯಿಂದ ಬಲಿಶಾಂತಿ ಸೇವೆ, ಮುಂಜಾನೆ 4:30ಕ್ಕೆ ಹಿಂಡಿಸ್ಕೆರೆ ಮಂಡಳಿಯಿಂದ ಗಂಡುಕತ್ತರಿ ಸೇವೆ ಹಾಗೂ ಮುಂಜಾನೆ 5:30ಕ್ಕೆ ಚಿಕ್ಕನಾಯಕನಹಳ್ಳಿ ದೇವಾಂಗ ಮಂಡಳಿಯವರಿಂದ ಶಸ್ತ್ರಮಂಗಲಾರತಿ ಸೇವೆ ನೆರವೇರಲಿದೆ. ಅಂದು ದಿನವಿಡೀ ಉಭಯ ಮಂಡಳಿಗಳಿಂದ ಭವ್ಯ ವೀರಗಾರಿಕೆ ಸೇವೆ ಮುಂದುವರಿಯಲಿದೆ. ಜುಲೈ 2 (ಗುರುವಾರ): ದೇವ ದೇವತೆಯರಿಗೆ ಮಹಾರಥೋತ್ಸವ ಹಾಗೂ ಉಯ್ಯಾಲೆ ಉತ್ಸವ ನಡೆಯಲಿದ್ದು, ಇದರೊಂದಿಗೆ 20 ವರ್ಷಗಳ ನಂತರದ ಈ ಐತಿಹಾಸಿಕ ಮಹೋತ್ಸವವು ಸಂಪನ್ನಗೊಳ್ಳಲಿದೆ.