ಮೂಲ್ಕಿ: ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಬ್ರಹ್ಮಕಲಶೋತ್ಸವ ಅಂಗವಾಗಿ ಮಾ.4ರಂದು ಮುಕ್ಕದಿಂದ ಕ್ಷೇತ್ರದವರೆಗೆ ಕಾಲ್ನಡಿಗೆ ಮೂಲಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಬ್ರಹ್ಮಕಲಶೋತ್ಸವದ ಸಂದರ್ಭ ಭೇಟಿ ನೀಡುವ ನಿರೀಕ್ಷೆಯಿದೆ. ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವೆಂದು ಸಸಿಹಿತ್ಲು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ 8 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಅಂಗವಾಗಿ ಸಸಿಹಿತ್ಲು ಭಗವತಿ ದೇವಸ್ಥಾನದ ದಿವ್ಯಾಮೃತ ಭೋಜನ ಮಂದಿರದಲ್ಲಿ ಕ್ಷೇತ್ರದ ಸೇವೆಯಲ್ಲಿ ತೊಡಗಿರುವ ಎಲ್ಲ ಉಪಸಮಿತಿ ಪದಾಧಿಕಾರಿಗಳ ಮತ್ತು ಸದಸ್ಯರುಗಳ ಕೊನೆಯ ಮಹತ್ವದ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಈಗಾಗಲೇ ವಿಧಾನಪರಿಷತ್ ಸದಸ್ಯರುಗಳ ಅನುದಾನದಿಂದ 20 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಎದುರು ಭಾಗದ ರಸ್ತೆ ಕಾಂಕ್ರಿಟೀಕರಣ ಸುಸಜ್ಜಿತವಾಗಿ ನಡೆಯುತ್ತಿದೆ. ಹಳೆಯಂಗಡಿ ಪಂಚಾಯಿತಿ ವತಿಯಿಂದ 4.5 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಎದುರು ಭಾಗ ಚರಂಡಿ ಕಾಮಗಾರಿ ಹಾಗೂ ಹೈ ಮಾಸ್ಟ್ ದೀಪ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ರಸ್ತೆ ಕಾಮಗಾರಿ

ಶಾಸಕ ಉಮಾನಾಥ ಕೋಟ್ಯಾನ್ ಅವರ ಸುಮಾರು 10 ಲಕ್ಷ ರು. ವೆಚ್ಚದ ಅನುದಾನದಲ್ಲಿ ಹಳೆಯಂಗಡಿ- ಸಸಿಹಿತ್ಲು ರಸ್ತೆ ಫೇವರ್ ಫಿನಿಷ್ ಕಾಮಗಾರಿ ನಡೆಯಲಿದೆಯೆಂದು ಹೇಳಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಲ್ಚಡ ಮಾತನಾಡಿ ಮಾ.4 ರಿಂದ 8ರವರೆಗೆ ನಡೆಯಲಿರುವ ಸಸಿಹಿತ್ಲು ಶ್ರೀ ಭಗವತಿ ದೇವಿಯ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಸ್ವಯಂಸೇವಕರ ಜೊತೆ ಆಹರ್ನಿಶಿ ದುಡಿಯುತ್ತಿದ್ದು ಬ್ರಹ್ಮಕಲಶೋತ್ಸವ ವಿಶ್ವಕ್ಕೆ ಮಾದರಿಯಾಗಲೆಂದು ಹೇಳಿದರು. ಉಚಿತ ಬಸ್‌ ವ್ಯವಸ್ಥೆ

ಸ್ವಯಂ ಸೇವಕ ಸಮಿತಿಯ ವಿನೋದ್ ಸಾಲ್ಯಾನ್ ಬೆಳ್ಳಾಯರು ಬ್ರಹ್ಮಕಲಶೋತ್ಸವ ಸಂದರ್ಭ ಕ್ಷೇತ್ರಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು ಎಂದು ನಳಿನ್ ಕುಮಾರ್ ಕಟೀಲು ಅವರಲ್ಲಿ ಕೋರಿದರು. ಬಸ್ ಮಾಲಕರ ಜೊತೆ ಮಾತನಾಡಿ ಕ್ಷೇತ್ರಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಲಾಗುವುದು ಹಾಗೂ ಕ್ಷೇತ್ರದ ಪಾರ್ಕಿಂಗ್ ವ್ಯವಸ್ಥೆ ಬಳಿಯಿಂದ ವಯೋ ವೃದ್ಧರಿಗೆ ಕ್ಷೇತ್ರಕ್ಕೆ ಬರಲು ಉಚಿತ ಎಲೆಕ್ಟ್ರಿಕ್ ಆಟೋ ವ್ಯವಸ್ಥೆ ಕಲ್ಪಿಸಲಾಗುವುದೆಂದು ನಳಿನ್‌ ತಿಳಿಸಿದರು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಮಾತನಾಡಿ ಬ್ರಹ್ಮಕಲಶೋತ್ಸವದ ಸಂದರ್ಭ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದ್ದು ಅತಿಥಿಸತ್ಕಾರ ಮನೋಭಾವ ಬೆಳೆಸಿಕೊಂಡರೆ ಕ್ಷೇತ್ರದ ಬ್ರಹ್ಮ ಕಲಶ ಯಶಸ್ವಿಯಾಗಲಿದೆ ಎಂದರು. ಬಳಿಕ 36 ವಿವಿಧ ಸಮಿತಿಗಳ ಸದಸ್ಯರು ಮಾತನಾಡಿದರು.

ಕ್ಷೇತ್ರದ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಸಮಿತಿಯ ಪದಾಧಿಕಾರಿಗಳಾದ ವಿಶ್ವನಾಥ ಬೆಳ್ಚಡ, ಪಂದಬೆಟ್ಟು, ಕೆ.ಸುದರ್ಶನ್ ಮೂಡಬಿದ್ರೆ, ಕಸ್ತೂರಿ ಪಂಜ, ಈಶ್ವರ ಕಟೀಲ್, ದಿವಾಕರ ಸಾಮಾನಿ, ಗೀತಾ ಪಿ ಕುಮಾರ್, ಸುನಿಲ್ ಆಳ್ವ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ, ಕೋಶಾಧಿಕಾರಿ ಸುರೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಯಾಗಿದ್ದು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗುರುರಾಜ್ ಮಲ್ಲಿಗೆಯಂಗಡಿ ಅವರನ್ನು ಗೌರವಿಸಲಾಯಿತು. ಸಮಿತಿಯ ರಾಜೇಂದ್ರ ಪ್ರಸಾದ್ ನಿರೂಪಿಸಿದರು.