ಸಾಸ್ವೇಹಳ್ಳಿ ಏತ ನೀರಾವರಿ: 3 ತಿಂಗಳಲ್ಲಿ ಪೂರ್ಣಗೊಳಿಸಿ: ಬಿ.ಆರ್.ರಘು

| Published : Feb 12 2024, 01:32 AM IST

ಸಾಸ್ವೇಹಳ್ಳಿ ಏತ ನೀರಾವರಿ: 3 ತಿಂಗಳಲ್ಲಿ ಪೂರ್ಣಗೊಳಿಸಿ: ಬಿ.ಆರ್.ರಘು
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನು 3 ತಿಂಗಳ ಒಳಗಾಗಿ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸದಿದ್ದರೆ ಚನ್ನಗಿರಿ ತಾಲೂಕು ಕಸಬಾ ಹೋಬಳಿ, ಸಂತೇಬೆನ್ನೂರು ಹೋಬಳಿ, ಬಸವಾಪಟ್ಟಣ ಹೋಬಳಿ, ಸಾಸ್ವೇಹಳ್ಳಿ ಹೋಬಳಿ ರೈತರು ಚುನಾವಣೆ ಬಹಿಷ್ಕರಿಸುವ ನಿರ್ಧಾರ ಮಾಡಿದ್ದೇವೆ. ಯೋಜನೆಯಡಿ ಚನ್ನಗಿರಿ ತಾಲೂಕಿನ 120 ಕೆರೆ, ಹೊನ್ನಾಳಿ ತಾಲೂಕಿನ 4 ಕೆರೆ, ಶಿವಮೊಗ್ಗ ಜಿಲ್ಲೆಯ 12 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ತುಂಗಭದ್ರಾ ನದಿಯಿಂದ ಸೂಳೆಕೆರೆಗೆ ನೀರು ತುಂಬಿಸುವ, ಚನ್ನಗಿರಿ, ಹೊನ್ನಾಳಿ ತಾಲೂಕಿನ ನಾಲ್ಕು ಹೋಬಳಿಗೆ ನೀರೊದಗಿಸುವ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ 3 ತಿಂಗಳಲ್ಲಿ ಪೂರ್ಣಗೊಳಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಖಡ್ಗ ಸಂಸ್ಥೆಯ ಬಿ.ಆರ್.ರಘು ಎಚ್ಚರಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 11.9.2017ರಂದು ಆಗಿನ ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣನವರ ಇಚ್ಛಾಶಕ್ತಿ, ಬದ್ಧತೆ, ರೈತ ಪರ ಕಾಳಜಿಯಿಂದ ಆರಂಭವಾದ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಮಾ.10, 2022ಕ್ಕೆ ಪೂರ್ಣವಾಗಬೇಕಿತ್ತು. ಆದರೆ, ಈವರೆಗೆ ಶೇ.75ರಷ್ಟು ಕಾಮಗಾರಿಯೂ ಪೂರ್ಣವಾಗಿಲ್ಲ ಎಂದರು.

ಇನ್ನು 3 ತಿಂಗಳ ಒಳಗಾಗಿ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸದಿದ್ದರೆ ಚನ್ನಗಿರಿ ತಾಲೂಕು ಕಸಬಾ ಹೋಬಳಿ, ಸಂತೇಬೆನ್ನೂರು ಹೋಬಳಿ, ಬಸವಾಪಟ್ಟಣ ಹೋಬಳಿ, ಸಾಸ್ವೇಹಳ್ಳಿ ಹೋಬಳಿ ರೈತರು ಚುನಾವಣೆ ಬಹಿಷ್ಕರಿಸುವ ನಿರ್ಧಾರ ಮಾಡಿದ್ದೇವೆ. ಯೋಜನೆಯಡಿ ಚನ್ನಗಿರಿ ತಾಲೂಕಿನ 120 ಕೆರೆ, ಹೊನ್ನಾಳಿ ತಾಲೂಕಿನ 4 ಕೆರೆ, ಶಿವಮೊಗ್ಗ ಜಿಲ್ಲೆಯ 12 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಜನ ಪ್ರತಿನಿಧಿಗಳು, ಅಧಿಕಾರಿಗಳ ಅಸಡ್ಡೆ, ಇಚ್ಛಾಶಕ್ತಿ ಕೊರತೆಯಿಂದಾಗಿ ಯೋಜನೆ ಈವರೆಗೆ ಪೂರ್ಣಗೊಂಡಿಲ್ಲ ಎಂದು ದೂರಿದರು.

ಈಗಾಗಲೇ ಏತ ಯೋಜನೆಯಡಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಪೂರ್ಣವಾಗಿದೆ. ಅಧಿಕಾರಿಗಳ ಪ್ರಕಾರ ಶೇ.90 ಕಾಮಗಾರಿ ಪೂರ್ಣವಾಗಿದೆ. ಆದರೆ, ಭೌತಿಕವಾಗಿ ಗಮನಿಸಿದರೂ ಇನ್ನೂ ಶೇ.35-40 ಕಾಮಗಾರಿ ಬಾಕಿ ಇರುವುದು ಸ್ಪಷ್ಟವಾಗಿದೆ. ಹೊನ್ನಾಳಿ ತಾಲೂಕಿನ ಹಟ್ಟಿಹಾಳ್‌ ಜಾಕ್ ವೆಲ್‌ ಸಮೀಪವೇ ಗಣಿಗಾರಿಕೆ ಮಾಡಲಾಗುತ್ತಿದೆ. ಒಂದು ವೇಳೆ ಇಂತಹ ಗಣಿಗಾರಿಕೆ ನಿಲ್ಲಿಸದಿದ್ದರೆ, ಪೈಪ್ ಲೈನ್, ಜಾಕ್‌ ವೆಲ್‌ಗೂ ಧಕ್ಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಇಲಾಖೆ ಗಮನಕ್ಕೆ ತಂದರೂ ಯಾರೂ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ನೀರಾವರಿ ನಿಗಮವು ಯೋಜನೆಗೆ ತೀವ್ರತೆ ನೀಡಲು ಉದಾಸೀನ ಮಾಡುತ್ತಿದೆ. ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಆರಂಭದಿಂದ ಈವರೆಗೂ ಜನಪ್ರತಿನಿಧಿಗಳು, ಆಳಿದ ಸರ್ಕಾರಗಳು ಅಸಡ್ಡೆ ತೋರುತ್ತಲೇ ಬಂದಿವೆ. ಯೋಜನೆ ಆರಂಭ‍ಾದ ವರ್ಷದಿಂದ ಈವರೆಗೆ 3 ಬರಗಾಲಗಳನ್ನು ರೈತರು ಅನುಭವಿಸುತ್ತಿದ್ದರೂ, ಯೋಜನೆ ಜಾರಿಗೆ ಸರ್ಕಾರ ಉದಾಸೀನ ಮಾಡುತ್ತಿದೆ. ಕಾಮಗಾರಿ ವಿಳಂಬಕ್ಕೆ ಕಾರಣ ಏನೆಂಬುದನ್ನು ಸಂಬಂಧಿಸಿದ ನೀರಾವರಿ ನಿಗಮವು ಸಾರ್ವಜನಿಕವಾಗಿ ತಿಳಿಸಬೇಕು. ಯೋಜನೆ ಕಾರ್ಯ ರೂಪಕ್ಕೆ ಬಂದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ ಎಂದರು. ಸಂಸ್ಥೆಯ ಚಂದ್ರಹಾಸ ಲಿಂಗದಹಳ್ಳಿ, ಸೈಯದ್ ನಯಾಜ್, ಸುನೀಲ್, ಕುಬೇಂದ್ರ ಸ್ವಾಮಿ ಇತರರಿದ್ದರು.