ಸಾರಾಂಶ
- ಗಾಯತ್ರಿ ಪರ ಬೃಹತ್ ರೋಡ್ ಶೋ ನಡೆಸಿ ಸಂಸದ ಸಿದ್ದೇಶ್ವರ ಹೇಳಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಚನ್ನಗಿರಿ ತಾಲೂಕಿಗೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ತಂದಿದ್ದು ನಾನು ಮತ್ತು ಆಗ ಶಾಸಕರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ. ಸಿರಿಗೆರೆ ಶ್ರೀಗಳ ಸಹಕಾರದಿಂದ ಯೋಜನೆ ತಂದಿದ್ದು, ಇದಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸದ ಡಾ. ಜಿ.ಎಂ.ಸಿದ್ದೇಶ್ವರ್ ಹೇಳಿದರು.ಚನ್ನಗಿರಿ, ಸಂತೆಬೆನ್ನೂರಿನಲ್ಲಿ ಪತ್ನಿ ಗಾಯತ್ರಿ ಸಿದ್ದೇಶ್ವರ್ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಇಷ್ಟೊತ್ತಿಗೆ ಪೂರ್ತಿಗೊಂಡು ಕೆರೆಗಳಿಗೆ ನೀರು ತುಂಬಿಸಬೇಕಿತ್ತು. ಆದರೆ, ಯಾರೋ ಒಬ್ಬರು ನ್ಯಾಯಾಲಯಕ್ಕೆ ಹೋಗಿದ್ದರಿಂದ ಅನುಷ್ಠಾನ ವಿಳಂಬವಾಗಿದೆ. ನ್ಯಾಯಾಲಯದಲ್ಲಿನ ಪ್ರಕರಣ ಇತ್ತೀಚೆಗಷ್ಟೇ ಕ್ಲಿಯರ್ ಆಗಿದೆ. ಬರುವ ಮಳೆಗಾಲದಲ್ಲಿ ಚನ್ನಗಿರಿ ತಾಲೂಕಿನ ಎಲ್ಲ ಕೆರೆಗಳ ತುಂಬಿಸಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿ ಪಟ್ಟಣದ ಯುಜಿಡಿಗೆ ಅಂತ ₹100 ಕೋಟಿ ಅನುದಾನ ತಂದಿದ್ದರು. ಈಗಿನ ಶಾಸಕರು ಆ ಅನುದಾನ ಬಳಸಿ, ಕೆಲಸ ಮಾಡತ್ತಿದ್ದಾರೆ. ನಾವು ಹಣ ತರುವುದು, ಕೆಲಸ ಮಾಡುವುದು. ಕಾಂಗ್ರೆಸ್‌ನವರು ಬಂದು ಶಂಕುಸ್ಥಾಪನೆ, ಉದ್ಘಾಟನೆ ಮಾಡುವುದೇ ಆಗಿದೆ ಎಂದು ವಾಗ್ದಾಳಿ ನಡೆಸಿದರು.ಚನ್ನಗಿರಿ ಅಡಕೆ ನಾಡು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮೊನ್ನೆ ಚನ್ನಗಿರಿಗೆ ಬಂದಾಗ ಹೇಳ್ತಿದ್ರು; ನಾವು ಪಾನ್ ಮಸಾಲ, ಗುಟ್ಖಾ ತಯಾರು ಮಾಡ್ತಿವಿ, ನಿಮ್ಮ ಆರೋಗ್ಯ ಕೆಡುತ್ತದೆ ಎಂದು. ಇದೇ ಎಸ್.ಎಸ್.ಮಲ್ಲಿಕಾರ್ಜುನ್ ಫೈರ್ ಅನ್ನೋ ಹೆಸರಿನಲ್ಲಿ ಗುಟ್ಕಾ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕಲ್ಲೇಶ್ವರ ಮಿಲ್ ಪಕ್ಕದಲ್ಲೇ ಫ್ಯಾಕ್ಟರಿ ಮಾಡಿಕೊಂಡಿದ್ದಾರೆ. ಈಗ ಅವರ ಪತ್ನಿ ದಂತ ವೈದ್ಯೆ ಬಂದು ನಿಮ್ಮ ಹಲ್ಲು ಕ್ಲೀನ್ ಮಾಡ್ತಾರಂತೆ. ಮಲ್ಲಿಕಾರ್ಜುನ್ ಬಾಯಿ ಬಿಟ್ಟರೆ ಬರೀ ಸುಳ್ಳೇ ಹೇಳುವುದು ಎಂದು ಚಾಟಿ ಬಿಸಿದರು.
ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಚನ್ನಗಿರಿ ತಾಲೂಕು ಮೊದಲು ಗ್ರಾಮದ ರೀತಿ ಇತ್ತು. ನಾನು ಮತ್ತು ಸಿದ್ದೇಶಣ್ಣ ಚನ್ನಗಿರಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ನೀವು ಪ್ರತಿನಿತ್ಯ ಓಡಾಡುವ ಸಿಸಿ ರಸ್ತೆ ನಾವು ಮಾಡಿಸಿದ್ದು. 100 ಹಾಸಿಗೆ ಆಸ್ಪತ್ರೆ, ಚನ್ನಗಿರಿ ಕೆರೆ ಅಭಿವೃದ್ಧಿ, ಉಬ್ರಾಣಿ ಏತ ನೀರಾವರಿ ಯೋಜನೆ, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಹೀಗೆ ಹತ್ತಹಲವು ಯೋಜನೆ ತರುವುದಕ್ಕೆ ಸಿದ್ದೇಶಣ್ಣನ ಶ್ರಮವೂ ಇದೆ. ಹೀಗಾಗಿ ಈ ಬಾರಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ, ದೆಹಲಿ ಪಾರ್ಲಿಮೆಂಟ್‌ಗೆ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಮಂಡಲ ಅಧ್ಯಕ್ಷರು, ಸದಸ್ಯರು, ಬೂತ್ ಕಮಿಟಿ ಅಧ್ಯಕ್ಷರು, ಸದಸ್ಯರು, ಜಿಪಂ, ತಾಪಂ ಮಾಜಿ ಸದಸ್ಯರು, ಗ್ರಾಪಂಗಳ ಹಾಲಿ, ಮಾಜಿ ಸದಸ್ಯರು, ಅಧ್ಯಕ್ಷರು, ಕಾರ್ಯಕರ್ತರು ಭಾಗಿಯಾಗಿದ್ದರು.
- - -(-ಫೋಟೋ ಇದೆ)