ಸಾರಾಂಶ
ಸಾತೇನಹಳ್ಳಿಯ ವಾರನಹಳ್ಳಿ ಗ್ರಾಮದಲ್ಲಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ । ಒಂದು ತಿಂಗಳಿಂದ ನೀರಿಲ್ಲಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಸಾತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು ಗುರುವಾರ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.ಕಳೆದ ಒಂದು ತಿಂಗಳಿನಿಂದ ದಂಡಿಗನಹಳ್ಳಿ ಹೋಬಳಿ ಸಾತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಾರ್ಯದರ್ಶಿಯವರನ್ನು ಒಂದು ತಿಂಗಳಿನಿಂದ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಿಡಿಒ ಮತ್ತು ಕಾರ್ಯದರ್ಶಿ ಅವರು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ತಮ್ಮಿಂದ ಆಗುವುದಿಲ್ಲ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಭೇಟಿ ಮಾಡಿ ಎಂದು ಗ್ರಾಮಸ್ಥರು, ಗ್ರಾಪಂ ಸದಸ್ಯ ಯೋಗೇಶ್‌ಗೆ ತಿಳಿಸಿದ್ದಾರೆ.ಸಾತೇನಹಳ್ಳಿಯ ಗ್ರಾಮ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಕಳೆದ ಒಂದು ತಿಂಗಳ ಹಿಂದೆ ವಾರನಹಳ್ಳಿ ಗ್ರಾಮದಲ್ಲಿ ಇದ್ದಂತಹ ಕೊಳವೆ ಬಾವಿಗಳ ಮೋಟರ್ ಮತ್ತು ಪೈಪುಗಳನ್ನು ದುರಸ್ತಿ ಹೆಸರಿನಲ್ಲಿ ಹೊರ ತೆಗೆದು ದುರಸ್ತಿ ಮಾಡಿಸದೆ ಕೊಳವೆ ಬಾವಿಯ ಪೈಪು ಮತ್ತು ಮೋಟಾರ್‌ಗಳ ಸ್ಥಿತಿ ಏನಾಗಿದೆ ಎಂಬುದು ತಿಳಿಯುತ್ತಿಲ್ಲ. ಈಗಾಗಲೇ ಜಿಲ್ಲಾಧಿಕಾರಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಅದರ ಅನ್ವಯ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮದ ಸುಶೀಲಮ್ಮ ಮಾತನಾಡಿ, ‘ಕಳೆದ ಒಂದು ತಿಂಗಳಿಂದ ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಆದರೆ ಈ ಸಮಸ್ಯೆಯನ್ನು ಕೇಳುವರು ಯಾರೂ ಇಲ್ಲ. ಕೇಳಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಮತ್ತು ಕಾರ್ಯದರ್ಶಿ, ಯಾವ ಸಿಬ್ಬಂದಿ ಕೂಡ ಇರುವುದಿಲ್ಲ. ಇಡೀ ಗ್ರಾಮ ಪಂಚಾಯಿತಿಯೇ ಖಾಲಿ ಇದೆ. ಕೆಲವು ದಿನಗಳಿಂದ ಸ್ನಾನವೂ ಕೂಡ ಮಾಡಿಲ್ಲ. ದನಕರುಗಳಿಗೂ ಕೂಡ ಕುಡಿಯುವ ನೀರು ಇಲ್ಲ. ನಾವು ಇಂದು ಆ ಕಾರಣಕ್ಕಾಗಿ ಗ್ರಾಮ ಪಂಚಾಯಿತಿ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ’ ಎಂದು ಅಳಲು ತೋಡಿಕೊಂಡರು.ಸಾತೇನಹಳ್ಳಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ವಾರನಹಳ್ಳಿ ಗ್ರಾಮಸ್ಥರು.