ಇಲ್ಲಿನ ಅಂಬೇಡ್ಕರ್ ಸಮುದಾಯ ಭವನದಲ್ಲೇ ಸೂಕ್ತ ಸೌಲಭ್ಯಗಳು ಇಲ್ಲದೆ ಅಂಗನವಾಡಿ, ಶಾಲೆ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸಾತಗಳ್ಳಿ ಅಂಬೇಡ್ಕರ್ ಕಾಲೋನಿಗೆ ಶನಿವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರು, ನರ್ಮ್ ಮನೆಗಳಲ್ಲಿ ವಾಸವಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದವರ ಕುಂದುಕೊರತೆ ಆಲಿಸಿದರು.ಸಾತಗಳ್ಳಿ ಅಂಬೇಡ್ಕರ್ ಕಾಲೋನಿಯಲ್ಲಿ 560 ಗುಂಪು ಮನೆಗಳಿದ್ದು, ಕಳೆದ 15 ವರ್ಷಗಳಿಂದ ವಾಸವಾಗಿದ್ದೇವೆ. ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಹಾಗೂ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇಲ್ಲಿನ ಅಂಬೇಡ್ಕರ್ ಸಮುದಾಯ ಭವನದಲ್ಲೇ ಸೂಕ್ತ ಸೌಲಭ್ಯಗಳು ಇಲ್ಲದೆ ಅಂಗನವಾಡಿ, ಶಾಲೆ ನಡೆಸಲಾಗುತ್ತಿದೆ. ಚಿಂತಾಜನಕ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ಅಳಲು ತೊಡಿಕೊಂಡರು.
ಇರುವುದು ಒಂದೇ ಬೋರ್ ವೆಲ್. ಅಷ್ಟೂ ಮನೆಗಳಿಗೂ ಒಂದೇ ಬೋರ್ ವೆಲ್ ನಲ್ಲಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕಳೆದ 15 ವರ್ಷದಿಂದಲೂ ಹೀನಾಯವಾಗಿ ಬದುಕು ನಡೆಸುತ್ತಿದ್ದೇವೆ. ಮನೆಗಳ ಸುತ್ತಲೂ ಕಸ ತುಂಬಿರುತ್ತದೆ. ಸ್ವಚ್ಛತೆ ಇಲ್ಲ. ಎಷ್ಟೇ ಮನವಿ ಮಾಡಿದರೂ ಯಾವೊಬ್ಬ ಅಧಿಕಾರಿಗಳು ಬರುವುದಿಲ್ಲ. ರಸ್ತೆ ಅಭಿವೃದ್ಧಿಯಾಗಿಲ್ಲ. ಕಟ್ಟಡಗಳ ಛಾವಣಿ ಹಾಳಾಗಿದೆ. ಗಾಂಜ- ಡ್ರಗ್ಸ್ ಸೇವನೆ ಮಾಡುವವರು ಸ್ಥಳಿಯರ ಮೇಲೆ ಹಲ್ಲೆ ನಡೆಸುತ್ತಾರೆ, ಪುಂಡರ ಹಾವಳಿ ಹೆಚ್ಚಾಗಿದ್ದು, ಸಂಜೆ ವೇಳೆ ತಿರುಗಾಡುವುದ ಕಷ್ಟವಾಗಿದೆ ಎಂದು ನಿವಾಸಿಗಳು ಅಹವಾಲು ಸಲ್ಲಿಸಿದರು.ಅನುದಾನ ಕೊರತೆ
ಅನುದಾನದ ಕೊರತೆಯಿಂದಾಗಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕಳೆದ 5 ವರ್ಷದಿಂದ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ. ಕಸ ವಿಲೇವಾರಿ ಸಂಬಂಧ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಕುಡಿಯುವ ನೀರಿನ ವ್ಯವಸ್ಥೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಾಪಾಲಕ ಎಂಜಿನಿಯರ್ ಸೈಯದ್ ಫಾತಿಮಾ ಮಾಹಿತಿ ನೀಡಿದರು.ಪೊಲೀಸರು ಬೀಟ್ ಮಾಡಿ
ಬಳಿಕ ಮಾತನಾಡಿದ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರು, ಸಾತಗಳ್ಳಿ ಅಂಬೇಡ್ಕರ್ ಕಾಲೋನಿಯಲ್ಲಿ ಪ್ರತೀ ದಿನ ಪೊಲೀಸರು ಬೀಟ್ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.ಪ್ರತಿ 6 ತಿಂಗಳಿಗೊಮ್ಮೆ ಯುಜಿಡಿ ಸ್ವಚ್ಛತೆಯಾಗಬೇಕು. ಸಮಾಜ ಕಲ್ಯಾಣ ಇಲಾಖೆ, ಕೊಳಗೇರಿ ಮಂಡಳಿ, ಪಟ್ಟಣ ಪಂಚಾಯಿತಿ ಅಧಿಕಾರಿ- ಸಿಬ್ಬಂದಿ ನಿವಾಸಿಗಳಿಗೆ ಸ್ವಚ್ಚತೆ ಕುರಿತು ಅರಿವು ಮೂಡಿಸಬೇಕು ಹಾಗೂ ನಿರ್ವಹಣೆ ಮಾಡಬೇಕು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಚರ್ಚಿಸಿ, ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಲಾಗುವುದು. ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಲ್ಲಿ ಬಹುತೇಕ ಕುಟುಂಬಗಳು ಇನ್ನೂ ಸೂರಿಲ್ಲದೆ ಬೀದಿಯಲ್ಲಿವೆ. ಆದ್ದರಿಂದ ಸಂಘಗಳನ್ನು ಮಾಡಿಕೊಂಡು, ಬೇಡಿಕೆ ಮತ್ತು ಮನವಿಗಳನ್ನು ಕಾಲ ಕಾಲಕ್ಕೆ ಸಲ್ಲಿಸಬೇಕು. ಸರ್ಕಾರದಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಸಂಘದಿಂದಲೂ ಸ್ವಚ್ಚತಾ ಕಾರ್ಯಗಳನ್ನು ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ಯಾವುದೇ ಅಹಿತಕರ ಘಟನೆಗಳು ನಡೆದರು ಪೊಲೀಸರ ಗಮನಕ್ಕೆ ತನ್ನಿ, ಒಗ್ಗಟ್ಟಿನಿಂದ ಸಂಘಟಿತರಾಗಿ ಎಂದು ಅವರು ಸಲಹೆ ನೀಡಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ, ಉಪಾಧ್ಯಕ್ಷ ವೆಂಕಟಾಚಲ, ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲಾ ಕೊರಮ- ಕೊರಚ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಕಾಯಕ, ಜಂಟಿ ಕಾರ್ಯದರ್ಶಿ ಎನ್. ರವಿಕುಮಾರ್, ಉಪಾಧ್ಯಕ್ಷ ರಮೇಶ್, ಮುಖಂಡರಾದ ಗಂಗಪ್ಪ, ಜಯಪ್ರಭು, ಪ್ರಸನ್ನಕುಮಾರ್, ದುರ್ಗಪ್ಪ, ರಾಮಪ್ಪ, ಶಿವಪುತ್ರ, ನಾಗಪ್ಪ ದೊಡ್ಡಮನಿ, ಗಂಗಾಧರ ಮೊದಲಾದವರು ಇದ್ದರು.