ಕನ್ನಡಪ್ರಭ ವಾರ್ತೆ ಹಾಸನ ಸಮಕಾಲೀನ ಸಮಾಜ, ರಾಜಕೀಯ ಬೆಳವಣಿಗೆಗಳು ಹಾಗೂ ಜನಜೀವನದ ಪ್ರಮುಖ ವಿದ್ಯಮಾನಗಳನ್ನು ಕೆಲವೇ ರೇಖೆಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಸಾಮರ್ಥ್ಯ ವ್ಯಂಗ್ಯಚಿತ್ರಗಳಿಗಿದೆ. ಸಾವಿರಾರು ಪದಗಳಲ್ಲಿ ವಿವರಿಸಬೇಕಾದ ಸುದ್ದಿಯ ಸಾರವನ್ನು ಒಂದೇ ಚಿತ್ರದಲ್ಲಿ ಕಟ್ಟಿಕೊಡುವ ಶಕ್ತಿ ವ್ಯಂಗ್ಯಚಿತ್ರಕ್ಕಿದೆ ಎಂದು ಹಿರಿಯ ವ್ಯಂಗ್ಯಚಿತ್ರಕಾರ ಹಾಗೂ ವ್ಯಂಗ್ಯ ಲೋಕ ಸಂಪಾದಕ ಎಂ.ವಿ. ಶಿವರಾಂ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮೂರು ನಾಲ್ಕು ದಶಕಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ವ್ಯಂಗ್ಯಚಿತ್ರಕಾರರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಆಧರಿಸಿ ‘ವ್ಯಂಗ್ಯ ಲೋಕ’ ಎಂಬ ಪಾಕ್ಷಿಕ ಆನ್‌ಲೈನ್ ವ್ಯಂಗ್ಯಚಿತ್ರ ಪತ್ರಿಕೆಯನ್ನು ಆರಂಭಿಸುತ್ತಿರುವುದಾಗಿ ತಿಳಿಸಿದರು. ಆಗಸ್ಟ್ ೧೫ರಂದು ಪತ್ರಿಕೆ ಲೋಕಾರ್ಪಣೆಗೊಳ್ಳಲಿದೆ ಎಂದರು. ವ್ಯಂಗ್ಯಚಿತ್ರವು ಕೇವಲ ನಗಿಸುವ ಕಲೆಯಲ್ಲ. ಅದು ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುವ ಪ್ರಬಲ ಮಾಧ್ಯಮ. ಆಡಳಿತ, ರಾಜಕೀಯ, ಸಾಮಾಜಿಕ ಬದಲಾವಣೆಗಳು ಹಾಗೂ ದಿನನಿತ್ಯದ ಜನಜೀವನದ ಘಟನೆಗಳನ್ನು ಸರಳವಾದ ರೇಖೆ ಮತ್ತು ಕಲ್ಪನೆಯ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ವ್ಯಂಗ್ಯಚಿತ್ರಕಾರರು ಮಾಡುತ್ತಿದ್ದಾರೆ ಎಂದು ಹೇಳಿದರು. ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ಸ್ಮರಿಸಿದ ಅವರು, ‘ಜನತಾ ಮಾಧ್ಯಮ’ ಪತ್ರಿಕೆಯ ಮೂಲಕ ವ್ಯಂಗ್ಯಚಿತ್ರ ರಚನೆ ಆರಂಭಿಸಿದ್ದಾಗಿ ತಿಳಿಸಿದರು. ಸುಮಾರು ಐದಾರು ವರ್ಷಗಳ ಕಾಲ ನಿರಂತರವಾಗಿ ಆ ಪತ್ರಿಕೆಗೆ ಚಿತ್ರಗಳನ್ನು ನೀಡಿದ್ದು, ಬಳಿಕ ‘ಸುಧಾ’, ‘ತರಂಗ’ ಸೇರಿದಂತೆ ವಿವಿಧ ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ದಿನಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾಗಿ ಹೇಳಿದರು. ಆರಂಭದ ದಿನಗಳಲ್ಲಿ ಒಂದು ವ್ಯಂಗ್ಯಚಿತ್ರಕ್ಕೆ ಐದು ರೂಪಾಯಿ ಸಂಭಾವನೆ ದೊರೆಯುತ್ತಿದ್ದ ಸಂದರ್ಭವಿತ್ತು. ಆದರೆ ಅಂದಿನ ದಿನಗಳಲ್ಲಿ ಹಣಕ್ಕಿಂತ ತಮ್ಮ ಚಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿ ಓದುಗರನ್ನು ತಲುಪುವುದು ದೊಡ್ಡ ಸಂತೋಷವಾಗಿತ್ತು. ಪತ್ರಿಕೆಗಳಲ್ಲಿಯೂ ವ್ಯಂಗ್ಯಚಿತ್ರಗಳಿಗೆ ಗೌರವಯುತ ಸ್ಥಾನಮಾನವಿತ್ತು ಎಂದು ಅವರು ನೆನಪಿಸಿಕೊಂಡರು.೧,೫೦೦ಕ್ಕೂ ಹೆಚ್ಚು ಚಿತ್ರಗಳ ಪ್ರಕಟಣೆ ಸುಮಾರು ೩೦-೪೦ ವರ್ಷಗಳ ತಮ್ಮ ಪಯಣದಲ್ಲಿ ವಿವಿಧ ಪತ್ರಿಕೆಗಳಲ್ಲಿ ೧,೫೦೦ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ಈ ಕ್ಷೇತ್ರದ ಸೇವೆಗೆ ರಾಜ್ಯಮಟ್ಟದ ಪ್ರಶಸ್ತಿಗಳೂ ಲಭಿಸಿವೆ ಎಂದು ತಿಳಿಸಿದರು. ವ್ಯಂಗ್ಯಚಿತ್ರಕ್ಕೆ ದೀರ್ಘ ಇತಿಹಾಸವಿದ್ದು, ಹಿಂದಿನ ಕಾಲದಿಂದಲೂ ರಾಜರು, ಆಡಳಿತ ವ್ಯವಸ್ಥೆ ಹಾಗೂ ಸಾಮಾಜಿಕ ವಿದ್ಯಮಾನಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಅಭಿವ್ಯಕ್ತಪಡಿಸುವ ಪರಂಪರೆ ಇತ್ತು. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಇಂದು ಇಂಕ್, ಬ್ರಷ್‌ನಂತಹ ಸಾಂಪ್ರದಾಯಿಕ ವಿಧಾನಗಳ ಜೊತೆಗೆ ಡಿಜಿಟಲ್ ತಂತ್ರಜ್ಞಾನವೂ ವ್ಯಂಗ್ಯಚಿತ್ರ ರಚನೆಗೆ ಹೊಸ ವೇಗ ನೀಡಿದೆ ಎಂದರು.ವ್ಯಂಗ್ಯ ಲೋಕವನ್ನು ಆರಂಭಿಸುವ ಉದ್ದೇಶ ಕೇವಲ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುವುದಕ್ಕೆ ಸೀಮಿತವಾಗಿಲ್ಲ. ಶಾಲಾಕಾಲೇಜು ವಿದ್ಯಾರ್ಥಿಗಳಲ್ಲಿ ಚಿತ್ರಕಲೆ ಮತ್ತು ಸೃಜನಶೀಲತೆಯ ಆಸಕ್ತಿ ಬೆಳೆಸುವುದು, ವ್ಯಂಗ್ಯಚಿತ್ರ ರಚನೆಯ ಬಗ್ಗೆ ಕಾರ್ಯಾಗಾರಗಳನ್ನು ನಡೆಸುವುದು ಹಾಗೂ ಮುಂದಿನ ಪೀಳಿಗೆಯ ವ್ಯಂಗ್ಯಚಿತ್ರಕಾರರನ್ನು ರೂಪಿಸುವುದು ಪತ್ರಿಕೆಯ ಪ್ರಮುಖ ಆಶಯವಾಗಿದೆ. ನಾನು ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್. ನನ್ನನ್ನು ನಾನು ದೊಡ್ಡ ಕಲಾವಿದ ಎಂದು ಎಂದಿಗೂ ಪರಿಗಣಿಸಿಲ್ಲ. ಚಿತ್ರ ಬಿಡಿಸುವುದು ನನ್ನ ಆಸಕ್ತಿ. ಯಾರಿಗಾದರೂ ಕಲಿಯುವ ಆಸಕ್ತಿ ಇದ್ದರೆ ಚಿತ್ರ ಬಿಡಿಸಲು ಸಾಧ್ಯ ಎಂಬ ಸಂದೇಶವನ್ನು ಮುಂದಿನ ಪೀಳಿಗೆಗೆ ನೀಡಬೇಕೆಂಬ ಉದ್ದೇಶದಿಂದ ಈ ಪತ್ರಿಕೆಯನ್ನು ಆರಂಭಿಸುತ್ತಿದ್ದೇನೆ ಎಂದರು. ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ವ್ಯಂಗ್ಯಚಿತ್ರದಂತಹ ಸೃಜನಶೀಲ ಅಭಿವ್ಯಕ್ತಿ ಮಾಧ್ಯಮಕ್ಕೆ ಹೊಸ ಪೀಳಿಗೆಯನ್ನು ಸೆಳೆಯುವ ಪ್ರಯತ್ನವಾಗಿ ವ್ಯಂಗ್ಯ ಲೋಕ ರೂಪುಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಮಾಹಿತಿ ನೀಡಿದರು.
ವ್ಯಂಗ್ಯ ಲೋಕ ಪಾಕ್ಷಿಕ ಪತ್ರಿಕೆ ಇಂದು ಲೋಕಾರ್ಪಣೆ
‘ವ್ಯಂಗ್ಯ ಲೋಕ’ ಎಂಬ ಪಾಕ್ಷಿಕ ಆನ್‌ಲೈನ್ ವ್ಯಂಗ್ಯಚಿತ್ರ ಪತ್ರಿಕೆಯನ್ನು ಆರಂಭಿಸುತ್ತಿರುವುದಾಗಿ ತಿಳಿಸಿದರು. ಆಗಸ್ಟ್ ೧೫ರಂದು ಪತ್ರಿಕೆ ಲೋಕಾರ್ಪಣೆಗೊಳ್ಳಲಿದೆ ಎಂದರು. ವ್ಯಂಗ್ಯಚಿತ್ರವು ಕೇವಲ ನಗಿಸುವ ಕಲೆಯಲ್ಲ. ಅದು ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುವ ಪ್ರಬಲ ಮಾಧ್ಯಮ. ಆಡಳಿತ, ರಾಜಕೀಯ, ಸಾಮಾಜಿಕ ಬದಲಾವಣೆಗಳು ಹಾಗೂ ದಿನನಿತ್ಯದ ಜನಜೀವನದ ಘಟನೆಗಳನ್ನು ಸರಳವಾದ ರೇಖೆ ಮತ್ತು ಕಲ್ಪನೆಯ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ವ್ಯಂಗ್ಯಚಿತ್ರಕಾರರು ಮಾಡುತ್ತಿದ್ದಾರೆ ಎಂದು ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.