ಸಾರಾಂಶ
ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ದ.ಕ. ನಿರ್ಗಮಿತ ಸಂಸದ ನಳಿನ್ ಕುಮಾರ್ ಕಟೀಲ್ ಪಾಲ್ಗೊಂಡು ಮಾತನಾಡಿ, ಕಳೆದ ಮೂರು ಅವಧಿಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದನಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುವುದರೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕಳೆದ ಮೂರು ಅವಧಿಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದನಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುವುದರೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ ಎಂದು ದ.ಕ. ನಿರ್ಗಮಿತ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು.ನಾನು ಪ್ರಚಾರದ ಹಿಂದೆ ಹೋದವನಲ್ಲ. ಅಭಿವೃದ್ಧಿ ಕೆಲಸಗಳ ಕುರಿತಂತೆ ಸಾಮಾಜಿಕ ತಾಣಗಳಲ್ಲಿ ನನ್ನ ಬಗ್ಗೆ ಬಹಳ ಚರ್ಚೆಯಾಯಿತು. ಆದರೆ ನನ್ನ ಕಾರ್ಯಗಳ ಬಗ್ಗೆ ನನ್ನ ಬಳಿ ಅಧಿಕೃತ ಸರ್ಕಾರಿ ಅಂಕಿ ಅಂಶಗಳಿವೆ. ಅಭಿವೃದ್ಧಿ ಆಗಿಲ್ಲ ಎಂಬ ಚರ್ಚೆಗೆ ನಾನು ಉತ್ತರ ಕೊಡಲು ಹೋಗಿಲ್ಲ, ಸಂಸದನಾಗಿ ನನ್ನ ಕೆಲಸವನ್ನು ಇತಿಮಿತಿಯೊಳಗೆ ಪ್ರಾಮಾಣಿಕತೆಯಿಂದ ಮಾಡಿದ್ದೇನೆ ಎಂದರು.ಪಂಪ್‌ವೆಲ್, ನಂತೂರು ವಿಚಾರಗಳು ನ್ಯಾಯಾಲಯದಲ್ಲಿದ್ದ ಸಮಸ್ಯೆಗಳು. ಈ ವಿಚಾರದಲ್ಲಿ ನಾನು ಮಾತನಾಡಲು ಆಗುವುದಿಲ್ಲ. ಹಾಗಾಗಿ ಸುಮ್ಮನಿದ್ದೆ. ಸಾಮಾನ್ಯ ಕಾರ್ಯಕರ್ತನಾದ ನಾನು ನನ್ನ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರ್ಶ ಗ್ರಾಮದಲ್ಲಿ ನಮ್ಮ ಜಿಲ್ಲೆ ಇಡೀ ದೇಶಕ್ಕೆ ಮಾದರಿ ಆಗಿದೆ ಎಂದರು.
ಅವಕಾಶಕ್ಕಾಗಿ ಕಾಯಬೇಕು: ಪಕ್ಷ ಬೆಳೆದಾಗ ನಾವು ಅವಕಾಶಕ್ಕಾಗಿ ಕಾಯಲೇ ಬೇಕು. ಸಾಮಾಜಿಕ ನ್ಯಾಯ, ಚರ್ಚೆಗಳು ಬಂದಾಗ ಒತ್ತಡಗಳು ಇರುತ್ತದೆ. ನಾನು ರಾಜ್ಯಾಧ್ಯಕ್ಷನಾಗಿದ್ದಾಗಲೂ ನನಗೆ ಎಲ್ಲರಿಗೆ ಟಿಕೆಟ್ ಕೊಡಿಸಲು ಆಗಿಲ್ಲ. ಅದರೆ ಸಿದ್ದಾಂತ, ತತ್ವ ನಮ್ಮ ಹೃದಯದಲ್ಲಿ ಇರಬೇಕು. ಮುಂದಿನ ಬಿಜೆಪಿ ಸಂಸದರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.ನಂತೂರಿನ ಮೇಲ್ಸೇತುವೆ ಕಾಮಗಾರಿ ಭಾರಿ ಗೊಂದಲ್ಲಿತ್ತು. ಕಾಮಗಾರಿಗೆ ತುಂಬಾ ಅಡಚಣೆ ಇತ್ತು. ಆದರೆ ಈಗ ಅದು ಸರಿಯಾಗಿದೆ. ಸ್ಥಳೀಯ ನಿವಾಸಿಗಳಿಗೆ ಸ್ವಲ್ಪ ಕಾಲಾವಕಾಶ ನೀಡಲಾಗಿದ್ದು, ಕೆಲ ಮನೆ ತೆರವು ಕೋರ್ಟ್ ಕೇಸ್ ಇತ್ತು. ಈಗ ಎಲ್ಲ ಸರಿ ಆಗಿದ್ದು, ಶೀಘ್ರವಾಗಿ ಕಾಮಗಾರಿ ಆರಂಭ ಆಗಲಿದೆ ಎಂದು ನಳಿನ್ ಕುಮಾರ್ ಹೇಳಿದರು.ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಇದ್ದರು.