ಸತೀಶ ಜಾರಕಿಹೊಳಿ ವಿರುದ್ಧ ತಳವಾರ ಮಹಾಸಭಾ ಕಿಡಿ

| Published : Jan 29 2025, 01:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ತಳವಾರರು ನಕಲಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ. ನಾವೆಲ್ಲ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದೇವೆ ಎಂದು ಹೇಳಿರುವ ಸಚಿವರ ನಡೆಗೆ ನಮ್ಮ ಖಂಡನೆ ಇದೆ ಎಂದು ರಾಜ್ಯ ತಳವಾರ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಕಾಶ ಸೊನ್ನದ ತಳವಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಳವಾರರು ನಕಲಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ. ನಾವೆಲ್ಲ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದೇವೆ ಎಂದು ಹೇಳಿರುವ ಸಚಿವರ ನಡೆಗೆ ನಮ್ಮ ಖಂಡನೆ ಇದೆ ಎಂದು ರಾಜ್ಯ ತಳವಾರ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಕಾಶ ಸೊನ್ನದ ತಳವಾರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಕೇಂದ್ರದ ಗೆಜೆಟ್ ಪ್ರಕಾರವೇ ಪ್ರಮಾಣಪತ್ರ ಪಡೆದಿದ್ದು, ತಳವಾರ ಪರಿವಾರ ಸಮಾಜದವರು ಯಾರೂ ನಕಲಿ ಪ್ರಮಾಣಪತ್ರ ಪಡೆದಿಲ್ಲ. ನಕಲಿ ಪ್ರಮಾಣಪತ್ರ ತೆಗೆದುಕೊಂಡವರಿಗೆ ನಮ್ಮದೂ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಉಪಾಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ತಳವಾರರು ಸರ್ಟಿಫಿಕೆಟ್ ಪಡೆದುಕೊಂಡಿದ್ದು ಖೊಟ್ಟಿ ಇವೆ ಎಂದು ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ‌. ತಳವಾರ ಎಂಬುದು ಒಂದೇ ಸಮಾಜವಿದೆ. ಇದರಲ್ಲೇ ವಿಭಜನೆ ಮಾಡಲು ಹೊರಟಿದ್ದು ತಪ್ಪು. ಅದರ ಬಗ್ಗೆ ಮಾತನಾಡುತ್ತಿರುವ ಸಚಿವ ಸತೀಶ ಜಾರಕಿಹೊಳಿ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ತಾಲೂಕಾ ಅಧ್ಯಕ್ಷ ಶ್ರೀಮಂತ ತಳವಾರ ಮಾತನಾಡಿ, ಯಾದಗಿರಿಯಲ್ಲಿ ಸತೀಶ ಜಾರಕಿಹೊಳಿ ಅವರು ನಮ್ಮ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದಾರೆ. 88H ನಲ್ಲಿ ಇರುವುದು ಒಂದೇ ತಳವಾರ ಸಮಾಜ. ಅವರು ಬೇರೆ ಬೇರೆ ಎಂದು ಹೇಳಿ ಅನ್ಯಾಯ ಮಾಡುತ್ತಿದ್ದಾರೆ. ನೀವು ಇದೇ ರೀತಿ ಮುಂದುವರೆಸಿದರೆ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ನಿಮಗೆ ಪಾಠ ಕಲಿಸಲಿದ್ದೇವೆ ಎಂದು ಎಚ್ಚರಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಶಿವಾಜಿ ಮೆಟಗಾರ ಮಾತನಾಡಿ, 2020ರಲ್ಲಿ ತಳವಾರ, ಪರಿವಾರ ಗೆಜೆಟ್ ಆಯಿತು. ಸಾಕಷ್ಟು ಹೋರಾಟದ ಮೂಲಕ ಪ್ರಮಾಣಪತ್ರ ಕೊಡುವ ಕೆಲಸ ಶುರುವಾಗಿದೆ. ಆದರೆ, ಇವರು ನಿರಂತರವಾಗಿ ನಮಗೆ ಸಮಸ್ಯೆ ಮಾಡುತ್ತಿದ್ದಾರೆ ಎಂದರು.

ತಳವಾರ ಸಮಾಜಕ್ಕೆ ಪ್ರಮಾಣಪತ್ರ ಕೊಡಬೇಕೆಂದು ಕೇಂದ್ರದ ಗೆಜೆಟ್ ಆಗಿದೆ, ಅದರ ಮೇಲೆ ಪ್ರಮಾಣಪತ್ರ ಕೊಡಲಾಗುತ್ತಿದೆ. ಮೂರು ಸಾವಿರ ಜನ ನ್ಯಾಯಾಲಯದ ಮೂಲಕ ಪ್ರಮಾಣಪತ್ರ ತೆಗೆದುಕೊಂಡಿದ್ದೇವೆ. ತಳವಾರ ಪರಿವಾರ ಸಮಾಜದ ಜನರಿಗೆ ನೋವಾಗುವಂತೆ, ಅಪಮಾನ ಆಗುವಂತೆ ಮಾತನಾಡಿದ್ದಾರೆ. ಇನ್ನು, ವಾಲ್ಮಿಕಿ ಮಹರ್ಷಿಗಳು ಯಾವ ಸಮುದಾಯದವರು ಎಂದು ಸರ್ಕಾರದ ಮಟ್ಟದಲ್ಲೇ ಅಧಿಕೃತವಾಗಿ ಹೇಳಬೇಕು. ವಾಲ್ಮೀಕಿಯನ್ನೇ ಕದ್ದಿದ್ದಾರೆ ಎಂಬ ಆರೋಪ ಇದೆ. ಇದರ ಬಗ್ಗೆ ಚರ್ಚೆ ಆಗಬೇಕು, ಈ ವಿಚಾರ ಎಲ್ಲರಿಗೂ ಗೊತ್ತಾಗಲಿ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಎಸ್.ಎ.ದೇಗಿನಾಳ, ಧರ್ಮರಾಜ ವಾಲಿಕಾರ, ಸಿದ್ದಪ್ಪ ಮೈದರಗಿ, ಗಂಗೂಬಾಯಿ ಧುಮಾಳೆ ಉಪಸ್ಥಿತರದಿದ್ದರು.

--------------

ಕೋಟ್‌

ಸಂವಿಧಾನದ ಬಗ್ಗೆ ಗೌರವ ಇರುವ ಸಚಿವ ಸತೀಶ ಜಾರಕಿಹೊಳಿ ಅವರು 2 ಲಕ್ಷ ಜನ ಖೊಟ್ಟಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರ ಖೊಟ್ಟಿ ಸರ್ಟಿಫಿಕೇಟ್ ಕೊಡುತ್ತಿದ್ದರೆ ನೀವು ಯಾಕೆ ಅಂತಹ ಸರ್ಕಾರದಲ್ಲಿದ್ದೀರಿ?, ರಾಜೀನಾಮೆ ಕೊಟ್ಟು ಬನ್ನಿ ಎಂದು ಸವಾಲು ಹಾಕಿದರು. ಅವರ ಹೇಳಿಕೆಯನ್ನು ತಳವಾರ ಮಹಾಸಭಾದಿಂದ ಖಂಡಿಸುತ್ತೇವೆ. ಅಗತ್ಯ ಬಿದ್ದರೆ ಜಾರಕಿಹೊಳಿ ವಿರುದ್ಧ ಹೋರಾಟ ಮಾಡುತ್ತೇವೆ.

ಶಿವಾಜಿ ಮೆಟಗಾರ, ಹೋರಾಟ ಸಮಿತಿ ಅಧ್ಯಕ್ಷ