ಮೂರನೇ ಬಾರಿ ಮೋದಿ ಗೆಲವಿಗೆ ಸತೀಶ್‌ ಕುಂಪಲ ಕರೆ

| Published : Feb 12 2024, 01:32 AM IST

ಸಾರಾಂಶ

ಪಂಡಿತ್‌ ದೀನ್‌ದಯಾಳ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಉದ್ಘಾಟನೆ ಬಳಿಕ ಪಕ್ಷದ ವಿವಿಧ ಪದಾಧಿಕಾರಿಗಳಿಗೆ ಕಾರ್ಯಾಗಾರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭಾ ಚುನಾವಣೆಯನ್ನು ಬಿಜೆಪಿ ಸಮರ್ಥವಾಗಿ ಎದುರಿಸಲಿದ್ದು, ದ.ಕ.ದಲ್ಲಿ ಬಿಜೆಪಿ ಅಭ್ಯರ್ಥಿಯನ್ನು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಹೇಳಿದ್ದಾರೆ. ದ.ಕ. ಬಿಜೆಪಿ ವತಿಯಿಂದ ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪಂಡಿತ್‌ ದೀನ್‌ದಯಾಳ್‌ ಜನ್ಮದಿನಾಚರಣೆ ಹಾಗೂ ಶಕ್ತಿ ವಂದನಾ ಅಭಿಯಾನದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಜಿಲ್ಲಾ ಬಿಜೆಪಿಗೆ ಹೊಸ ತಂಡ ರಚನೆಯಾಗಿದ್ದು, ಅದರ ಪ್ರಥಮ ಕಾರ್ಯಕ್ರಮ ಇದು. ಸಂಘಟನಾತ್ಮಕವಾಗಿ ಈ ತಂಡ ಸಕ್ರಿಯವಾಗಿ ಕೆಲಸ ಮಾಡಲಿದೆ. ಮೂರನೇ ಬಾರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮುಂದುವರಿಸಲು ಈಗಿನಿಂದಲೇ ಕಾರ್ಯೋನ್ಮುಖವಾಗಬೇಕು. ಪ್ರತಿ ಬೂತ್‌ ಮಟ್ಟದಲ್ಲಿ ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸಲಿದೆ ಎಂದರು. ಪಂಡಿತ್‌ ದೀನ್‌ದಯಾಳ್‌ ಅವರ ಅಂತ್ಯೋದಯ ಚಿಂತನೆಯಡಿ ಪಕ್ಷ ಬೆಳೆಯುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ. ಸ್ವಸಹಾಯ ಸಂಘಗಳು, ಅವುಗಳಿಗೆ ಪ್ರೇರಕವಾಗಿರುವ ಕಾರ್ಯಕರ್ತರನ್ನು ಗೌರವಿಸುವ ಕೆಲಸ ಆಗಬೇಕು. ಪ್ರಧಾನಿ ಕರೆಯಂತೆ ಗೋಡೆ ಬರಹ, ಶಕ್ತಿ ವಂದನಾ, ವಿಕಸಿತ ಭಾರತ, ವಿಶ್ವಕರ್ಮ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜನರನ್ನು ತಲುಪಿದ ಬಗ್ಗೆ ಖಾತರಿಪಡಿಸಿಕೊಳ್ಳುವಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಪಂಡಿತ್‌ ದೀನ್‌ ದಯಾಳ್‌ ಸಂಸ್ಮರಣೆ ಮಾಡಿದ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಮುಖಂಡ ಆರ್‌.ಸಿ.ನಾರಾಯಣ, ದೀನ್‌ದಯಾಳ್‌ರ ಏಕಾತ್ಮತಾ ಮಾನವತಾ ವಾದದಿಂದ ಪ್ರೇರಿತರಾಗಿ ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು. ದೀನ್‌ದಯಾಳ್‌ ಅವರು ಎಂದಿಗೂ ಸ್ಥಾನಮಾನಕ್ಕೆ ಆಸೆ ಪಟ್ಟವರಲ್ಲ. ವ್ಯಕ್ತಿ ಸೇರಿ ಪರಿವಾರ, ಪರಿವಾರದಿಂದ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಬಿತ್ತಿದವರು. ಪಕ್ಷಕ್ಕೆ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟ ದಾರ್ಶನಿಕರು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಪ್ರಾಸ್ತಾವಿಕದಲ್ಲಿ, ಶಕ್ತಿ ವಂದನಾ ಕಾರ್ಯಕ್ರಮ ಮಂಡಲ ಮಟ್ಟಗಳಲ್ಲಿ ನಡೆಯಬೇಕು. ಫೆ.23ರೊಳಗೆ ಸ್ವಸಹಾಯ ಸಂಘದ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಎನ್‌ಜಿಒಗಳನ್ನು ಸಂಪರ್ಕಿಸುವ ಕಾರ್ಯ ಪೂರ್ಣಗೊಳಿಸಬೇಕು. ಈ ಬಗ್ಗೆ ಸಂವಾದ, ಸಮಾವೇಶಗಳು ನಡೆಯಬೇಕು. ನಗರ ಸ್ಥಳೀಯಾಡಳಿತಗಳೂ ಇವುಗಳನ್ನು ನಡೆಸಬಹುದು ಎಂದರು. ಪಂಡಿತ್‌ ದೀನ್‌ದಯಾಳ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಉದ್ಘಾಟನೆ ಬಳಿಕ ಪಕ್ಷದ ವಿವಿಧ ಪದಾಧಿಕಾರಿಗಳಿಗೆ ಕಾರ್ಯಾಗಾರ ನಡೆಸಲಾಯಿತು. ದ.ಕ. ಸಹಪ್ರಭಾರಿ ನಿತಿನ್‌ ಕುಮಾರ್‌, ಯತೀಶ್‌ ಅರ್ವಾರ್‌ ಇದ್ದರು. ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ರಾವ್‌ ಸ್ವಾಗತಿಸಿದರು. ಬಬಿತಾ ರವೀಂದ್ರ ಅವರು ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ನಿರೂಪಿಸಿದರು.