ಉಪಚುನಾವಣೆ ಕಾಂಗ್ರೆಸ್ಸಿನ ಅಭೂತಪೂರ್ವ ಗೆಲುವಿನ ಹಿಂದೆ ಶಿಗ್ಗಾಂವಿಯಲ್ಲಿ ಸತೀಶ, ಸಂಡೂರಲ್ಲಿ ಸಂತೋಷ ಕಮಾಲ್!

| Published : Nov 24 2024, 01:49 AM IST / Updated: Nov 24 2024, 09:13 AM IST

ಉಪಚುನಾವಣೆ ಕಾಂಗ್ರೆಸ್ಸಿನ ಅಭೂತಪೂರ್ವ ಗೆಲುವಿನ ಹಿಂದೆ ಶಿಗ್ಗಾಂವಿಯಲ್ಲಿ ಸತೀಶ, ಸಂಡೂರಲ್ಲಿ ಸಂತೋಷ ಕಮಾಲ್!
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರದ ಗೆಲುವಿನಲ್ಲಿ ಸಂತೋಷ ಲಾಡ, ಸತೀಶ ಜಾರಕಿಹೊಳಿ ತಂತ್ರಗಾರಿಕೆ ಕೆಲಸ ಮಾಡಿದೆ.

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ: ಪ್ರಸಕ್ತ ಉಪಚುನಾವಣೆಯ ಶಿಗ್ಗಾಂವಿ, ಸಂಡೂರು, ಚೆನ್ನಪಟ್ಟಣ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಅಭೂತಪೂರ್ವ ಗೆಲುವಿನ ಹಿಂದೆ ಮೂವರು ಚುನಾವಣಾ ಚಾಣಕ್ಯರ ತಂತ್ರಗಾರಿಕೆ, ಗೆದ್ದೇ ತೀರುವ ಛಲ, ಸಂಘಟಿತ ಪ್ರಯತ್ನ ಕೆಲಸ ಮಾಡಿರುವುದು ಗಮನಾರ್ಹ.ಚೆನ್ನಪಟ್ಟಣ ಈ ಬಾರಿ ಅಕ್ಷರಶಃ ಕುರುಕ್ಷೇತ್ರವಾಗಿತ್ತು. 

ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಅವರ ವರ್ಚಸ್ಸು ಹೆಚ್ಚು ಕೆಲಸ ಮಾಡಿದೆ. ಜತೆಗೆ ಡಿಕೆ ಬ್ರದರ್ಸ್ ಪಕ್ಷ ನಿಷ್ಟೆ, ಮುಸ್ಲಿಂ ಮತಗಳನ್ನು ಕ್ರೋಢೀಕರಣ, ಸಿಎಂ ಸಿದ್ದರಾಮಯ್ಯ ಅವರ ಕೊನೆಯ ಹಂತದ ಕ್ಲೈಮ್ಯಾಕ್ಸ್ ಕಾಂಗ್ರೆಸ್‌ ಗೆಲುವಿಗೆ ಸಹಕಾರಿಯಾಗಿವೆ.ಆದರೆ ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಚಿತ್ರಣವೇ ಬೇರೆ. ಸತತ ನಾಲ್ಕು ಬಾರಿ ಕಮಲ ಅರಳಿದ್ದ ಬಿಜೆಪಿ ಕ್ಷೇತ್ರ ಶಿಗ್ಗಾಂವಿ ಕಾಂಗ್ರೆಸ್‌ ವಶವಾಗಿದೆ. ಕುಟುಂಬ ರಾಜಕಾರಣದ ಅಪವಾದದ ಮಧ್ಯೆಯೂ ಕಾಂಗ್ರೆಸ್‌ ಸಂಡೂರು ಕ್ಷೇತ್ರ ಉಳಿಸಿಕೊಂಡಿದೆ. 

ಜನಾರ್ದನ ರೆಡ್ಡಿ ವಿರೋಧಿ ಅಲೆ ಬಿಜೆಪಿಗೆ ದುಬಾರಿಯಾದರೆ, ಯುವಕರಿಗೆ ಕ್ಷೇತ್ರಗಳ ಉಸ್ತುವಾರಿ ಕೊಟ್ಟು ತಳಮಟ್ಟದಲ್ಲಿ ಪಕ್ಷ ಸಂಘಟಿಸಿ ಗೆಲುವಿನ ನಗೆ ಬೀರಿದೆ.ಅಹಿಂದ ಮತಗಳ ಕ್ರೋಢೀಕರಣ:ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಿಡಿತಲ್ಲಿದ್ದ ಶಿಗ್ಗಾಂವಿ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವುದು ಕಾಂಗ್ರೆಸ್ಸಿಗೆ ಸಣ್ಣ ಮಾತಾಗಿರಲಿಲ್ಲ. 

ಈ ಸತ್ಯವನ್ನು ಅರಿತ ಸಚಿವ ಸತೀಶ ಜಾರಕಿಹೊಳಿ ಮೊದಲು ಮಾಡಿದ ಕೆಲಸವೇ ಶಿಗ್ಗಾಂವಿ ಕ್ಷೇತ್ರದಲ್ಲಿನ ವಿವಿಧ ಸಮುದಾಯಗಳ ಮತದಾರರ ಸಮೀಕ್ಷೆ ಮತ್ತು ಅಧ್ಯಯನ. ಶೇ.72 ರಷ್ಟು ಇರುವ ಅಹಿಂದ ಮತಗಳು ಕ್ರೋಢಿಕರಣವಾದರೆ ಗೆಲುವು ಗ್ಯಾರಂಟಿ ಎನ್ನುವ ಮಾಹಿತಿಯನ್ನು ಅವರು ಕಾಂಗ್ರೆಸ್‌ ಹೈಕಮಾಂಡ್‌ಗೆ ಮನವರಿಕೆ ಮಾಡಿದರು.ಚುನಾವಣಾ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್‌ ಪಕ್ಷ ಕೂಡ ಇವರನ್ನೇ ಉಸ್ತುವಾರಿಯಾಗಿ ನೇಮಿಸಿತು. 

ಸುಮಾರು ಒಂದೂವರೆ ತಿಂಗಳುಗಳ ಕಾಲ ತಮ್ಮ ತಂಡದ ಜತೆಗೆ ಶಿಗ್ಗಾಂವಿಯ ಗಂಗೀಬಾವಿ ರೆಸಾರ್ಟಿಲ್ಲಿ ಠಿಕಾಣಿ ಹೂಡಿದ್ದ ಜಾರಕಿಹೊಳಿ, ನಿತ್ಯವೂ ಒಂದೊಂದು ಸಮುದಾಯದ ಪ್ರಮುಖರನ್ನು ಒಂದೆಡೆ ಸೇರಿಸಿ ವಾಸ್ತವತೆ ಮನದಟ್ಟು ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರು.ಎಲ್ಲೂ ಅಬ್ಬರದ ಭಾಷಣ ಮಾಡಲಿಲ್ಲ, ಮಾಧ್ಯಮಗಳ ಬಳಿ ಹೋಗಲಿಲ್ಲ

 ಬದಲಾಗಿ ಹಠಕ್ಕೆ ಬಿದ್ದು ದಲಿತರ ಕೇರಿ, ಮುಸ್ಲಿಂರ ಮೊಹಲ್ಲಾ, ಹಿಂದುಳಿದವರ ಓಣಿಗಳನ್ನು ಸುತ್ತಿ ಅವರ ಗುಡಿ-ಗುಂಡಾರಗಳ ಕಟ್ಟೆಯ ಮೇಲೆ ಕುಳಿತು ಮಾತುಕತೆ ನಡೆಸಿ ಮತದಾರರ ಮನವೊಲಿಸಿದರು. ಮೇಲ್ವರ್ಗದ ಸಮುದಾಯಗಳ ಓಣಿಗಳನ್ನೂ ಸುತ್ತಿದರು. ಗುಪ್ತಗಾಮಿನಿಯಂತೆ ಕೆಲಸ ಮಾಡಿದ ಇವರ ಕಾರ್ಯಾಚರಣೆ ಅಹಿಂದ ಮತಗಳನ್ನು ಕ್ರೋಢೀಕರಣಗೊಳಿಸಿತು. ಹಾಗಾಗಿ ಶಿಗ್ಗಾಂವಿ ಕ್ಷೇತ್ರದ ಗೆಲುವಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಪಾತ್ರ ದೊಡ್ಡದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಪುತ್ರನ ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಬಸವರಾಜ ಬೊಮ್ಮಾಯಿ, ತಮ್ಮದೇ ಪಕ್ಷದ ಯುವ ಮುಖಂಡ ದುಂಡಿಗೌಡರ ಅಸಮಾಧಾನ ಮತ್ತು ಸತೀಶ ಜಾರಕಿಹೊಳಿ ಚುನಾವಣಾ ತಂತ್ರಗಾರಿಕೆ ನಿರ್ಲಕ್ಷಿಸಿದ್ದು ಬಿಜೆಪಿಗೆ ಆಘಾತ ತಂದೊಡ್ಡಿತು.ರೆಡ್ಡಿ ವಿರೋಧಿ ಅಲೆ:ತಾವು ಆಯ್ಕೆಯಾದ, ಮೀಸಲಾತಿ ಬಳಿಕ ತಮ್ಮ ಆಪ್ತ ಈ. ತುಕಾರಾಮ ಅವರಿಗೆ ರಾಜಕೀಯ ನೆಲೆ ಕಲ್ಪಿಸಿದ ಸಂಡೂರು ಕ್ಷೇತ್ರವನ್ನು ಉಳಿಸಿಕೊಳ್ಳುವುದು ಸಚಿವ ಸಂತೋಷ ಲಾಡ ಅವರಿಗೆ ಬಹುದೊಡ್ಡ ಸವಾಲಾಗಿತ್ತು. ಮೇಲಾಗಿ ಸಂಸದ ತುಕಾರಾಮ ಅವರ ಪತ್ನಿ ಅನ್ನಪೂರ್ಣ ಅವರನ್ನು ಕಣಕ್ಕಿಳಿಸಿದಾಗ ಕುಟುಂಬ ರಾಜಕಾರಣದ ಅಪಸ್ವರ ಜೋರಾಗಿತ್ತು.

 ಈ ಮಧ್ಯೆ ವಾಲ್ಮೀಕಿ ನಿಗಮದ ಹಗರಣದಲ್ಲಿ ಸ್ವತಃ ಸಚಿವ ನಾಗೇಂದ್ರ ಜೈಲು ಪಾಲಾಗಿದ್ದು ಕೂಡಾ ಪ್ರಚಾರದ ವೇಳೆ ಕಾಂಗ್ರೆಸ್‌ ವಿರುದ್ಧ ಬಿಜೆಪಿಗೆ ದೊಡ್ಡ ಅಸ್ತ್ರವಾಗಿತ್ತು.ಈ ಮಧ್ಯೆ ಬಿಜೆಪಿ ಸ್ಥಳೀಯ ನಾಯಕ ಕಾರ್ತಿಕ್‌ ಘೋರ್ಪಡೆ ಅವರನ್ನು ಕಡೆಗಣಿಸಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಕ್ಷೇತ್ರದ ಉಸ್ತುವಾರಿ ನೀಡಿದ್ದು, ಕ್ಷೇತ್ರದಲ್ಲಿ ರೆಡ್ಡಿ ವಿರೋಧಿ ಅಲೆ ಜೋರಾಯಿತು. ಕೆಲವೆಡೆ ಪ್ರಚಾರಕ್ಕೆ ಹೋದಾಗ ರೆಡ್ಡಿ ಅವರನ್ನು ಮತದಾರರು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡ ಘಟನೆಗಳೂ ನಡೆದವು.

ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ನಿತ್ಯವೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದ ಸಂತೋಷ ಲಾಡ, ಸತತ ಪ್ರಯತ್ನ, ಹಳ್ಳಿಗಳ ಓಡಾಟ, ಗ್ಯಾರಂಟಿಗಳ ಬಗ್ಗೆ ಮನವರಿಕೆ ಮಾಡಿದರು. ಹಾಗಾಗಿ ಮೊದಲಿನಿಂದಲೂ ತಮ್ಮೊಂದಿಗೆ ಆಪ್ತನಾಗಿ ನಿಂತಿರುವ ಸಂತೋಷ ಲಾಡ ನಡೆ ಈ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ ಪರ ಗಟ್ಟಿಯಾಗಿ ನಿಲ್ಲುವಂತೆ ಮಾಡಿದವು. ಅದೇ ಕಾಲಕ್ಕೆ ಸಚಿವ ಜಮೀರಹ್ಮದ್, ಮುಖ್ಯಮಂತ್ರಿಗಳ ಮೂರು ದಿಗಳ ಪ್ರವಾಸ ಗೆಲುವನ್ನು ಸುಲಭಗೊಳಿಸಿದವು.