ಸತ್ಪ್ರಜೆ ನಿರ್ಮಾಣ ತಂದೆ-ತಾಯಿ ಆದ್ಯ ಕರ್ತವ್ಯ: ಡಾ.ರಾಜಶೇಖರ ಶಿವಾಚಾರ್ಯರ

| Published : May 29 2024, 12:55 AM IST

ಸಾರಾಂಶ

ಬೀದರ ತಾಲೂಕಿನ ಡೊಂಗರಗಿ ಗ್ರಾಮದಲ್ಲಿ ನಡೆದ ಬಾಬುರಾವ ಸಂಪಾವತಿ ಹುಣಜೆ ದಂಪತಿಯ 50ನೇ ವಿವಾಹ ವಾರ್ಷಿಕೋತ್ಸವದಲ್ಲಿ ಡಾ.ರಾಜಶೇಖರ ಸ್ವಾಮಿ ಗೋರ್ಟಾರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ದೇಶ, ಧರ್ಮ, ಸಂಸ್ಕೃತಿ ಪರಿಪಾಲಿಸುವ ಗೌರವಿಸುವ ಮಕ್ಕಳ ನಿರ್ಮಾಣ ಮಾಡುವುದು ಎಲ್ಲ ತಂದೆ-ತಾಯಂದಿರ ಕರ್ತವ್ಯವಾಗಬೇಕು ಎಂದು ಬೇಮಳಖೇಡ ಗೋರ್ಟಾ ಮಠದ ಡಾ.ರಾಜಶೇಖರ ಶಿವಾಚಾರ್ಯರು ಕರೆ ನೀಡಿದರು.

ತಾಲೂಕಿನ ಡೊಂಗರಗಿ ಗ್ರಾಮದಲ್ಲಿ ನಡೆದ ಬಾಬುರಾವ ಸಂಪಾವತಿ ಹುಣಜೆ ದಂಪತಿಯ 50ನೇ ವಿವಾಹ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳನ್ನು ಬಾಲ್ಯದಿಂದಲೇ ತಿದ್ದಿ ತೀಡಿ ಸಂಸ್ಕಾರ ನೀಡುವುದು ತಾಯಿ-ತಂದೆಯರ ಆದ್ಯ ಕರ್ತವ್ಯವಾಗಬೇಕು.

ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಸಂಸ್ಕಾರ ದೊರೆತರೇ ಅವರು ದೇಶ, ಸಮಾಜದ ದೊಡ್ಡ ಆಸ್ತಿಯಾಗುವರು. ಬಾಬುರಾವ ದಂಪತಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದ್ದರಿಂದಲೇ ಇಂದು ಅವರ ಮಕ್ಕಳು ತಂದೆ-ತಾಯಿ ಗೌರವಿಸುವ ಮತ್ತು ಎಲ್ಲರನ್ನು ಪ್ರೀತಿಯಿಂದ ನೋಡುತ್ತಿರುವುದರಿಂದಲೆ ಇಂತಹ ಆದರ್ಶ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದರು.

ಬೆಳೆದು ನಿಂತ ಮಕ್ಕಳು ತಂದೆ-ತಾಯಿ ಗುರು ಹಿರಿಯರನ್ನು ಆದರಿಸಿ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ತಂದೆ-ತಾಯಿಯರ ಸೇವೆ ಮಾಡಿದರೆ ದೇವರು ಸ್ವತಃ ಬಂದು ಆಶೀರ್ವದಿಸಿದ ಹಲವಾರು ಘಟನೆ ನಮ್ಮ ದೇಶದಲ್ಲಿ ನಡೆದಿವೆ. ತಾಯಿ-ತಂದೆಯರ ಸೇವೆ ಮಾಡಿದರೆ ಬೇರೆ ದೇವತೆಗಳ ಸೇವೆ ಮಾಡುವ ಅವಶ್ಯಕತೆ ಇಲ್ಲವೆಂದು ದಾರ್ಶನಿಕರ ಅಂಬೋಣವಾಗಿದೆ. ತಂದೆ-ತಾಯಿ, ಗುರು ಹಿರಿಯರರನ್ನು ಗೌರವಿಸುವ ಶ್ರೇಷ್ಠ ಸಂಸ್ಕಾರವನ್ನು ರೂಡಿಸಿಕೊಳ್ಳುವುದರ ಜೊತೆಗೆ ಗೌರವಿಸುವ ಪುಣ್ಯದ ಕಾರ್ಯ ಎಲ್ಲರೂ ಆಚರಣೆಗೆ ತರಬೇಕೆಂದು ಶ್ರೀಗಳು ಹೇಳಿದರು.

ಚಂಪಾವತಿ ಬಾಬುರಾವ ಹುಣಜೆ ದಂಪತಿ ಸದ್ಗುರುಗಳ ಪಾದಪೂಜೆ ನೆರವೇರಿಸಿ ಗೌರವಾರ್ಪಣೆ ಸಮರ್ಪಿಸಿ ಆಶೀರ್ವಾದ ಪಡೆದರು.

ಬಂಧು ಬಳಗ ಮತ್ತು ಗ್ರಾಮದ ಗಣ್ಯರು, ಹಿತೈಶಿ ದಂಪತಿಗೆ ಸನ್ಮಾನ ಮಾಡಿ ಶುಭ ಕೋರಿದರು. ರಾಮಶೆಟ್ಟಿ ಹುಣಜೆ ಎಲ್ಲರನ್ನು ಸ್ವಾಗತಿಸಿ, ಸಂಗಯ್ಯ ಹಿರೇಮಠ ನಿರೂಪಿಸಿ, ಸಂತೋಷಕುಮಾರ ಹುಣಜೆ ವಂದಿಸಿದರು.

ಶಾಂತವೀರ ಹಿರೇಮಠ, ಮನೋಹರ ಮಾಲಿ ಬಿರಾದಾರ, ಸೋಮನಾಥ ತರನಳ್ಳಿ, ವೀರಶೆಟ್ಟಿ ಹುಡಗಿ, ಸಂಗಪ್ಪ ಏಣಕೂರ, ಧನರಾಜ ಸುಂಕನಾಳೆ, ಬಂಡೆಪ್ಪ ಬಿರಾದಾರ, ಹಾವಪ್ಪ ಬಿರಾದಾರ ಮುಂತಾದ ಗಣ್ಯರು ನೂರಾರು ಜನ ಬಂಧು ಬಳಗ ಗ್ರಾಮಸ್ಥರು ಇದ್ದರು.