ಮಾರ್ಸ್ ಆಪ್‌ಗೆ ಗಣಪತಿಶ್ರೀ ಚಾಲನೆ

| Published : Jun 24 2024, 01:35 AM IST

ಮಾರ್ಸ್ ಆಪ್‌ಗೆ ಗಣಪತಿಶ್ರೀ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ನಗರದಲ್ಲಿ ಆಟೋ ಚಾಲಕರು ವಿವಿಧ ಗುಂಪುಗಳಾಗಿ ಸಂಘಟನೆ ರಚಿಸಿಕೊಂಡಿದ್ದಾರೆ. ಅವರನ್ನೆಲ್ಲಾ ಒಂದೇ ಸೂರಿನಡಿ ಸೇರಿಸುವ ಕೆಲಸ ಆಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಸಮಸ್ತ ಆಟೋ ಚಾಲಕರು, ಮಾಲೀಕರ ಸಮಗ್ರ ಅಭಿವೃದ್ಧಿಗೆ ಹಾಗೂ ಕುಟುಂಬದ ಭದ್ರತೆಗಾಗಿ ಮೈಸೂರು ಆಟೋರಿಕ್ಷಾ ಸರ್ವೀಸ್ ಟ್ರಸ್ಟ್ ಸಿದ್ಧಗೊಳಿಸಿರುವ ಮಾರ್ಸ್ ಆಪ್ ಅನ್ನು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಆಶ್ರಮದಲ್ಲಿ ಶನಿವಾರ ಚಾಲನೆ ನೀಡಿದರು.

ನಂತರ ಗಣಪತಿ ಶ್ರೀಗಳು ಮಾತನಾಡಿ, ಮೈಸೂರು ನಗರದಲ್ಲಿ ಆಟೋ ಚಾಲಕರು ವಿವಿಧ ಗುಂಪುಗಳಾಗಿ ಸಂಘಟನೆ ರಚಿಸಿಕೊಂಡಿದ್ದಾರೆ. ಅವರನ್ನೆಲ್ಲಾ ಒಂದೇ ಸೂರಿನಡಿ ಸೇರಿಸುವ ಕೆಲಸ ಆಗಬೇಕು. ಆಗ ಒಗ್ಗಟ್ಟಿನ ಹೋರಾಟ ಸಾಧ್ಯ. ಸಹಾಯ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಬಸ್ ನಲ್ಲಿ ಉಚಿತ ಪ್ರಯಾಣದ ಸೌಕರ್ಯದ ನಂತರ ಆಟೋ ಚಾಲಕರು ಕಷ್ಟದ ದಿನಗಳನ್ನು ಅನುಭವಿಸುತ್ತಿದ್ದಾರೆ. ಅವರಿಗೆ ಮಠದಿಂದ ಸಹಾಯ ಮಾಡೋಣವೆಂದರೆ ಅನೇಕ ಸಂಘಟನೆಗಳು ಬೆಳೆದು ನಿಂತಿವೆ. ಒಬ್ಬರಿಗೆ ನೀಡಿದರೆ ಇನ್ನೊಬ್ಬರಿಗೆ ಅಸಮಾಧಾನವಾಗುತ್ತದೆ. ಇಂತಹ ಸಮಸ್ಯೆ ತಪ್ಪಲು ನೀವೆಲ್ಲಾ ಒಂದಾಗಬೇಕು ಎಂದು ಅವರು ಕರೆ ನೀಡಿದರು.

ಗ್ರಾಹಕರಿಗೆ ನಿಮ್ಮ ಬಗ್ಗೆ ನಂಬಿಕೆ ಬರುವ ವರ್ತನೆ ನಿಮ್ಮಲ್ಲಿರಲಿ. ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ ಸಮಾಜದ ಬಗ್ಗೆ ಕಾಳಜಿಯಿರಲಿ. ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ಸಂಚಾರ ನಿಯಮ ಪಾಲಿಸಿ. ಪ್ರಯಾಣಿಕರೂ ಯಾರೋ ಕೆಲವರು ಮಾಡಿದ ತಪ್ಪಿಗೆ ಆಟೋ ಚಾಲಕರನ್ನು ಮೋಸ ಮಾಡುತ್ತಾರೆಂದು ದೃಢೀಕರಿಸುವುದು ಸಲ್ಲ ಎಂದರು.

ಮೈಸೂರಿನ ಸಮಸ್ತ ಆಟೋ ಚಾಲಕರು, ಮಾಲೀಕರ ಸಮಗ್ರ ಅಭಿವೃದ್ಧಿಗೆ ಹಾಗೂ ಆಟೋ ಚಾಲಕರ ಕುಟುಂಬದ ಭದ್ರತೆಗಾಗಿ ಮಾರ್ಸ್ (ಮೈಸೂರು ಆಟೋರಿಕ್ಷಾ ಸರ್ವೀಸ್) ಆಪ್ ಚಾಲ್ತಿಗೊಳಿಸಲಾಗಿದೆ.

ಅವಧೂತಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಮೈಸೂರು ಆಟೋರಿಕ್ಷಾ ಸರ್ವೀಸ್ ಟ್ರಸ್ಟ್ ಅಧ್ಯಕ್ಷ ಬಿ. ನಾಗರಾಜು, ಕಾನೂನು ಸಲಹೆಗಾರ ಸೂರ್ಯಕುಮಾರ್, ಆಪ್ ವ್ಯವಸ್ಥಾಪಕ ಮಂಜುನಾಥ್ ಮೊದಲಾದವರು ಇದ್ದರು.