ಹೊಸಪೇಟೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪಡಿಸಿಕೊಂಡಿರುವ ಕಳಂಕಿತ ಭ್ರಷ್ಟಾಚಾರಿ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೂಚನೆ ಮೇರೆಗೆ ಸ್ಥಳೀಯ ತಹಸೀಲ್ದಾರ್‌ ಕಚೇರಿ ಎದುರು ನಡೆದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಬಿಜೆಪಿ ಜಿಲ್ಲಾ ಸಹಪ್ರಭಾರಿ ಚನ್ನಬಸವನಗೌಡ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರ್ಣ ಮಾಡಿದೆ. ಮೂರು ವರ್ಷದಲ್ಲಿ ಸಾಕಷ್ಟು ಹಗರಣಗಳಾಗಿವೆ. ₹187 ಕೋಟಿ ಹಗರಣದ ರೂವಾರಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸದನದ ಹೊರಗೆ ಹಾಗೂ ಒಳಗೆ ಹೋರಾಟ ಹಮ್ಮಿಕೊಂಡಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವರೆಡ್ಡಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಹಗರಣಗಳು ಜರುಗಿವೆ. ಇದರಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ದೊಡ್ಡ ಪ್ರಮಾಣದ ಹಗರಣವಾಗಿದೆ. ಇದನ್ನು ಅಂದಿನ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಇದರ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ಕಳಂಕಿತ ಸಚಿವ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಸಚಿವ ನಾಗೇಂದ್ರ ರಾಜೀನಾಮೆ ನೀಡುವ ವರೆಗೆ ಬಿಜೆಪಿ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ಮುಖಂಡ ಬಿ.ಎಸ್. ಜಂಬಯ್ಯ ನಾಯಕ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡು ಕಳೆದ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ನಡೆಸಿದೆ. ₹187 ಕೋಟಿ ಹಗರಣದ ರೂವಾರಿ ಸಚಿವ ಬಿ. ನಾಗೇಂದ್ರ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಂಬರುವ ಚುನಾವಣೆಯಲ್ಲಿ ವಾಲ್ಮೀಕಿ ಸಮಾಜದ ಬಂಧುಗಳು ಕಾಂಗ್ರೆಸ್‌ಗೆ ಮತ ಹಾಕದೆ ತಕ್ಕ ಪಾಠ ಕಲಿಸಬೇಕು ಎಂದರು.

ಧರಣಿ ಸತ್ಯಾಗ್ರಹದಲ್ಲಿ ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂದೀಪ್ ಸಿಂಗ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್, ನಗರಸಭೆ ಉಪಾಧ್ಯಕ್ಷ ಜೀವರತ್ನಂ, ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಮುಖಂಡರಾದ ಕಾಸಿಟ್ಟಿ ಉಮಾಪತಿ, ಆರ್. ಕೊಟ್ರೇಶ್, ರೇವಣಸಿದ್ದಪ್ಪ, ಬಸವರಾಜ್ ನಾಲತ್ವಾಡ, ಶಂಕರ್ ಮೇಟಿ, ಚಿದಾನಂದಪ್ಪ, ಮಧುರಚೆನ್ನ ಶಾಸ್ತ್ರಿ, ನಟರಾಜ್, ಉಮಾದೇವಿ, ಪೂರ್ಣಿಮಾ ಲಲಿತಾ, ಅರ್ಪಿತಾ ಗೌಡ, ಅನುಪಮಾ, ಅನುರಾಧ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.