ಕಾರವಾರ ತಾಲೂಕಿನ ಸದಾಶಿವಗಡದ ಜೈದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಗ್ರಾಹಕರಿಗೆ ಸುಮಾರು ₹54 ಕೋಟಿ ವಂಚನೆಯಾದ ಪ್ರಕರಣ ಈವರೆಗೆ ಇತ್ಯರ್ಥವಾಗದ ಹಿನ್ನೆಲೆ ಫೆ. 2ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ವಂಚಿತ ಗ್ರಾಹಕರಿಂದ ಧರಣಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು.
ಇತ್ಯರ್ಥವಾಗದ ₹54 ಕೋಟಿ ವಂಚನೆ ಪ್ರಕರಣ
ಕನ್ನಡಪ್ರಭ ವಾರ್ತೆ ಕಾರವಾರಕಾರವಾರ ತಾಲೂಕಿನ ಸದಾಶಿವಗಡದ ಜೈದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಗ್ರಾಹಕರಿಗೆ ಸುಮಾರು ₹54 ಕೋಟಿ ವಂಚನೆಯಾದ ಪ್ರಕರಣ ಈವರೆಗೆ ಇತ್ಯರ್ಥವಾಗದ ಹಿನ್ನೆಲೆ ಫೆ. 2ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ವಂಚಿತ ಗ್ರಾಹಕರಿಂದ ಧರಣಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಡಾ. ಗಜೇಂದ್ರ ನಾಯ್ಕ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಿಂದ 600ಕ್ಕೂ ಹೆಚ್ಚು ಗ್ರಾಹಕರಿಂದ ₹54 ಕೋಟಿಗಿಂತಲೂ ಹೆಚ್ಚಿನ ಹಣ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಲಿಂಗರಾಜ ಪುತ್ತು ಕಲ್ಗುಟ್ಕರ್ ಹಣ ವಂಚನೆ ಪ್ರಕರಣದಲ್ಲಿ ಸಿಐಡಿ ತನಿಖೆಯ ಹಿನ್ನೆಲೆ ಕಳೆದ ಮೂರು ತಿಂಗಳಿಂದ ಜೈಲುಪಾಲಾಗಿದ್ದರೂ, ಸಂಸ್ಥೆಗೆ ಸಂಬಂಧಿಸಿದ ಇತರರ ವಿರುದ್ಧ ಈವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಂಚಿತ ಗ್ರಾಹಕರಿಗೆ ಈವರೆಗೆ ಸೂಕ್ತ ಪರಿಹಾರ ದೊರೆತಿಲ್ಲ. ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ತನಿಖಾ ಸಂಸ್ಥೆಗಳನ್ನು ಪ್ರಶ್ನಿಸಿದರೂ ಸ್ಪಷ್ಟ ಹಾಗೂ ಸಮಾಧಾನಕರ ಉತ್ತರ ಸಿಗುತ್ತಿಲ್ಲ. ಕಳೆದ ಆರು ತಿಂಗಳಿಂದ ಹಣ ಕಳೆದುಕೊಂಡ ಗ್ರಾಹಕರು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದರೂ ನ್ಯಾಯಯುತ ಪ್ರತಿಕ್ರಿಯೆ ದೊರಕದಿರುವುದು ವಿಷಾದಕರ ಎಂದು ಹೇಳಿದರು.ಈ ಹಿನ್ನೆಲೆ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ, ಫೆ. 2ರಂದು ಬೆಳಿಗ್ಗೆ ಬೆಂಗಳೂರಿನ ವಿಧಾನಸೌಧದ ಎದುರು ನೊಂದ ಗ್ರಾಹಕರಿಂದ ಧರಣಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಡಾ. ಗಜೇಂದ್ರ ನಾಯ್ಕ ತಿಳಿಸಿದ್ದಾರೆ.
ನೊಂದ ಗ್ರಾಹಕರ ಸಂಘದ ಅಧ್ಯಕ್ಷ ಎಚ್.ಎಫ್. ದೊಡ್ಡಣ್ಣವರ್, ಉಪಾಧ್ಯಕ್ಷ ರೋಹಿದಾಸ ತಾಮ್ಸೆ, ಸಹ ಕಾರ್ಯದರ್ಶಿ ಕೃಷ್ಣಾನಂದ ನಾಯ್ಕ, ಖಜಾಂಚಿ ಸಾಯಿನಾಥ ಎಲ್.ಮೇತ್ರಿ ಸೇರಿ ಸಂಘದ ಸದಸ್ಯರು ಇದ್ದರು.