ಪುತ್ತೂರಿನಲ್ಲಿ ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗದ ಸಭೆ

| Published : Feb 11 2024, 01:49 AM IST

ಪುತ್ತೂರಿನಲ್ಲಿ ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗದ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ರೋಟರಿ ಮನಿಶಾ ಹಾಲ್‌ನಲ್ಲಿ ‘ಈ ಬಾರಿ ನಮ್ಮೆಲ್ಲರ ಆಯ್ಕೆ ಸತ್ಯಜಿತ್ ಸುರತ್ಕಲ್’ ಎಂಬ ಹೆಸರಿನಲ್ಲಿ ಪುತ್ತೂರು ತಾಲೂಕಿನ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ರಾತ್ರಿ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು ಹಿಂದುತ್ವದ ಹೋರಾಟಗಾರರಿಗೆ ನ್ಯಾಯ ಸಿಗಬೇಕು. ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಅವಕಾಶ ಸಿಗಬೇಕು ಎಂಬ ನೆಲೆಯಲ್ಲಿ ಇವತ್ತು ಅಂತಿಮವಾಗಿ ನಿರ್ಣಾಯಕ ಹಂತದಲ್ಲಿ ಕಾರ್ಯಕರ್ತರ ಒತ್ತಡದ ಮೇರೆಗೆ ನಾನೊಬ್ಬ ನಿಮಿತ್ತವಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಲೋಕಸಭಾ ಸ್ಥಾನಕ್ಕೆ ಅವಕಾಶ ನೀಡುವಂತೆ ಕಾರ್ಯಕರ್ತರು ನನ್ನನ್ನು ಮುಂದಿಟ್ಟು ಹೋರಾಟಕ್ಕಿಳಿದ್ದಿದ್ದಾರೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು. ಅವರು ಪುತ್ತೂರು ರೋಟರಿ ಮನಿಶಾ ಹಾಲ್‌ನಲ್ಲಿ ‘ಈ ಬಾರಿ ನಮ್ಮೆಲ್ಲರ ಆಯ್ಕೆ ಸತ್ಯಜಿತ್ ಸುರತ್ಕಲ್’ ಎಂಬ ಹೆಸರಿನಲ್ಲಿ ಪುತ್ತೂರು ತಾಲೂಕಿನ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ರಾತ್ರಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕಳೆದ ೩೭ ವರ್ಷಗಳಿಂದ ಸಂಘ, ಸಂಘಟನೆ, ಪಕ್ಷ ಎಂದು ದುಡಿದಿದ್ದೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ಆದರೆ ನನ್ನನ್ನು ಹೊರ ಹಾಕುವ ಪ್ರಯತ್ನ ನಡೆಯಿತು. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಯಿತು. ಆದರೂ ನಾನು ಪಕ್ಷದ ಕುರಿತು ಯಾವುದೇ ಆರೋಪ ಮಾಡಿಲ್ಲ ಎಂದ ಅವರು, ಸಂಸದ ಸ್ಥಾನ ಎರಡು ಮೂರು ಸಲವಾದ ಬಳಿಕ ಬದಲಾವಣೆ ಆಗುತ್ತದೆ. ಕಾರ್ಯಕರ್ತರ ಆಧಾರದಲ್ಲಿ ಸಂಘದ ವ್ಯವಸ್ಥೆಯಲ್ಲಿರುವ ಜಿಲ್ಲೆಯಲ್ಲಿ ಈ ಬಾರಿ ಈಗಿರುವ ಸಂಸದರಿಗೆ ಮೂರು ಬಾರಿ ಅವಕಾಶ ಸಿಕ್ಕಿದೆ. ಹಾಗಾಗಿ ಈ ಬಾರಿ ಬದಲಾವಣೆ ಆಗಬೇಕು ಎಂದರು. ಪಕ್ಷ ಯಾಕಾಗಿ ನನಗೆ ಅವಕಾಶ ನೀಡಿಲ್ಲ ಎಂಬುದೇ ನನ್ನ ಪ್ರಶ್ನೆ. ನಾನು ಪಕ್ಷಕ್ಕೆ ಯಾಕೆ ಬರಬಾರದು ಎಂದು ಇವತ್ತಿಗೂ ಹೇಳಿಲ್ಲ. ನನ್ನಿಂದ ಏನು ತಪ್ಪಾಗಿದೆ ಎಂದು ಹೇಳಲಿ. ಒಂದು ವೇಳೆ ನನ್ನಿಂದ ತಪ್ಪಾಗಿದ್ದರೆ ನಾನು ಸಾಮಾನ್ಯ ಕಾರ್ಯಕರ್ತನಾಗಿ ಬಂದು ಕೆಲಸ ಮಾಡುತ್ತೇನೆ ಎಂದಿದ್ದೆ. ಆದರೆ ಅದಕ್ಕೂ ಕಳೆದ ೬ ವರ್ಷಗಳಿಂದ ಇವತ್ತಿನ ತನಕ ಉತ್ತರ ಸಿಕ್ಕಿಲ್ಲ ಎಂದು ಹೇಳಿದರು. ಸುದರ್ಶನ್ ಪುತ್ತೂರು ಅವರು ಮಾತನಾಡಿ, ನಮ್ಮ ನಾಯಕ ನರೇಂದ್ರ ಮೋದಿಯೇ ಆಗಿದ್ದಾರೆ. ಆದರೆ ಹಿಂದೂ ಸಂಘಟನೆ ಬೇರೆ ಬೇರೆ ಸಂಘಟನೆಯಾಗಿ ಒಡಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಅನ್ಯಾಯ ಆಗಿದೆ. ಅದೇ ರೀತಿ ವಂಚಿತರಾದವರಲ್ಲಿ ಸತ್ಯಜಿತ್ ಸುರತ್ಕಲ್ ಕೂಡಾ ಒಬ್ಬರು. ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗಲಿಲ್ಲ. ಕರಾವಳಿ ಭಾಗದಲ್ಲಿ ಬಿಜೆಪಿಯಿಂದ ಮನನೊಂದವರು ಹಲವಾರು ಮಂದಿ ಇದ್ದಾರೆ. ಹಾಗಾಗಿ ಈ ಬಾರಿ ಹೊಸ ವ್ಯಕ್ತಿಗೆ ಅವಕಾಶ ಕೊಡಬೇಕು. ಯಾರನ್ನೋ ತಂದು ಅದು ಹೈಕಮಾಂಡ್ ತೀರ್ಮಾನ ಎಂದು ಒತ್ತಡ ಹಾಕಬಾರದು. ಬದಲಾಗಿ ಸತ್ಯಜಿತ್ ಸುರತ್ಕಲ್ ಅವರಿಗೆ ಲೋಕಸಭಾ ಅಭ್ಯರ್ಥಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಸತ್ಯಜಿತ್ ಸುರತ್ಕಲ್ ಅವರ ಬೆಂಬಲಿಗರಾದ ಜಯಂತ್ ಪೂಜಾರಿ ಆಲಂಕಾರು, ಜನಾರ್ದನ ಪೂಜಾರಿ ಪದಡ್ಕ, ಸಂದೀಪ್ ಪಂಪ್ ವೆಲ್ ಉಪಸ್ಥಿತರಿದ್ದರು. ಪ್ರವೀಣ್ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.ವೇದಿಕೆಯಲ್ಲಿ ಸತ್ಯಜಿತ್ ಸುರತ್ಕಲ್ ಅವರ ಬೆಂಬಲಿಗರಾದ ಜಯಂತ್ ಪೂಜಾರಿ ಆಲಂಕಾರು, ಜನಾರ್ದನ ಪಡುಮಲೆ, ಸಂದೀಪ್ ಪಂಪ್ ವೆಲ್, ಧನಂಜಯ ಪಟ್ಲ, ಅವಿನಾಶ್ ಪುಣಚ, ಉದಯ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ಗಿರೀಶ್ ಪಡ್ಡಾಯೂರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರವೀಣ್ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.