ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಹಲವು ವಾಸ್ತವಗಳನ್ನು ಜನರ ಮುಂದಿಡುತ್ತ ಸತ್ಯಶೋಧ ಮಾಡುವುದೇ ರಂಗಭೂಮಿಯ ನಿಜ ಉದ್ದೇಶ. ಮಾನವೀಯ ಮತ್ತು ಸಮಸಮಾಜದ ಸಾಂವಿಧಾನಿಕ ಆಶಯಗಳೇ ರಂಗಭೂಮಿಯ ಕನಸುಗಳು ಎಂದು ಹಿರಿಯ ರಂಗಕಲಾವಿದ ಪ್ರಭಾಕರ್ ಕಾಪಿಕಾಡ್ ಹೇಳಿದರು.ಅವರು ಉಡುಪಿ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಉಡುಪಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಆಯೋಜಿಸಿರುವ ಮೂರು ದಿನಗಳ ‘ಮುರಾರಿ - ಕೆದ್ಲಾಯ ರಂಗೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.ಸಮಾಜವನ್ನು ಎಚ್ಚರವಾಗಿಡಲು ಕಾಲಕಾಲಕ್ಕೆ ಹಲವು ಚಳುವಳಿಗಳು ರೂಪಗೊಂಡವು. ರಂಗಚಳುವಳಿಯು ಒಂದು ಕಾಲದಲ್ಲಿ ಪ್ರಬಲ ಚಳವಳಿ ಆಗಿತ್ತು. ವ್ಯವಸ್ಥೆ, ಪ್ರಭುತ್ವಗಳ ವಿರುದ್ಧ ಬೀದಿನಾಟಕಗಳು ತುಂಬಾ ಪ್ರಯೋಗಗೊಂಡಿದ್ದವು. ಆದರೆ ಈಗ ಇದರಲ್ಲಿ ಯುವ ಸಮುದಾಯ ಪಾಲುದಾರಿಕೆ ಕಡಿಮೆ ಅನ್ನಿಸುತ್ತಿದೆ. ಈ ದಿಸೆಯಲ್ಲಿ ರಂಗಭೂಮಿ ಹೆಚ್ಚು ಜನರನ್ನು ಒಳಗೊಂಡ ಚಳುವಳಿಯಾಗಬೇಕು ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸಿ ಸಂಸ್ಥೆಯ ಚಟುವಟಿಕೆಗಳನ್ನು ಶ್ಲಾಘಿಸಿ ರಂಗೋತ್ಸವಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎನ್. ಸಂತೋಷ ಬಲ್ಲಾಳ, ನಾಟಕ ವಿಭಾಗದ ಸಂಚಾಲಕರಾದ ಸಂತೋಷ ನಾಯಕ್ ಪಟ್ಲ ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಜೊತೆ ಕಾರ್ಯದರ್ಶಿ ಜಿ.ಪಿ ಪ್ರಭಾಕರ್ ತುಮರಿ ಕಾರ್ಯಕ್ರಮ ನಿರೂಪಿಸಿದರು.
ಮೂರುದಿನಗಳ ಈ ಉತ್ಸವದಲ್ಲಿ ಮೊದಲ ದಿನದ ‘ಮೃತ್ಯುಂಜಯ’ ನಾಟಕವನ್ನು ರೋಹಿತ್ ಬೈಕಾಡಿ ಅವರ ನಿರ್ದೇಶನದಲ್ಲಿ ಮಣಿಪಾಲ ಸಂಗಮ ಕಲಾವಿದೆರ್ ಅಭಿನಯಿಸಿದರು.