ಸವಳು-ಜವಳು ಜಮೀನುಗಳಿಗೆ ಅಭಿವೃದ್ಧಿ ಭಾಗ್ಯ..!

| Published : Dec 28 2024, 01:00 AM IST

ಸಾರಾಂಶ

ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ, ಘಟಪ್ರಭಾ ಮತ್ತು ಮಾರ್ಕಂಡೇಯ ನದಿ ಪಾತ್ರದ ಸವಳು-ಜವಳು ಬಾಧಿತ ಜಮೀನುಗಳನ್ನು ಅಭಿವೃದ್ಧಿಪಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ವಿಶೇಷ ಯೋಜನೆ ರೂಪಿಸಲಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಹಿರಣ್ಯಕೇಶಿ, ಘಟಪ್ರಭಾ ಮತ್ತು ಮಾರ್ಕಂಡೇಯ ನದಿ ಪಾತ್ರದ ಸವಳು-ಜವಳು ಬಾಧಿತ ಜಮೀನುಗಳನ್ನು ಅಭಿವೃದ್ಧಿಪಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ವಿಶೇಷ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಸವಳು-ಜವಳು ಬಾಧಿತ ಮತ್ತು ಜಲಾವೃತ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.

ಗ್ರಾಮೀಣ ಜನರ ದುಡಿಯುವ ಕೈಗಳಿಗೆ ವರದಾನ ಎನಿಸಿರುವ ಮಹಾತ್ವಾಕಾಂಕ್ಷಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸವಳು-ಜವಳು ಜಮೀನು ಅಭಿವೃದ್ಧಿಪಡಿಸಲು ಅಗತ್ಯ ರೂಪುರೇಷೆ ಸಿದ್ಧಪಡಿಸಲಾಗಿದೆ. ತನ್ಮೂಲಕ ನದಿ ತೀರದ ಜಲಾನಯನ ಪ್ರದೇಶದ ಸಮಸ್ಯಾತ್ಮಕ ಮಣ್ಣು ಸುಧಾರಿಸುವ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಪ್ರಾಯೋಗಿಕವಾಗಿ ಈ ಯೋಜನೆಯ ಅನುಷ್ಠಾನಕ್ಕೆ ಹುಕ್ಕೇರಿ ತಾಲೂಕಿನ ಮೂರು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಸುಮಾರು 100 ಎಕರೆ ಸವಳು-ಜವಳು ಬಾಧಿತ ಜಮೀನು ಅಭಿವೃದ್ಧಿಪಡಿಸಿ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಗುರಿ ಹೊಂದಲಾಗಿದೆ. ಇದರೊಂದಿಗೆ ಕೃಷಿಗೆ ಯೋಗ್ಯವಲ್ಲದ ಜಮೀನಿನ ಮಣ್ಣು ಇನ್ಮುಂದೆ ಫಲವತ್ತತೆಯಾಗಿ ಕೃಷಿ ಸಾಗುವಳಿಗೆ ತೆರೆದುಕೊಳ್ಳುವ ಆಶಾಭಾವ ಮೂಡಿಸಿದೆ.

ಸುಲ್ತಾನಪುರ ಗ್ರಾಪಂ ವ್ಯಾಪ್ತಿಯ ಸುಲ್ತಾನಪುರದ 51 ರೈತರ 30 ಎಕರೆ ಜಮೀನು, ನೊಗನಿಹಾಳದ 12 ರೈತರ 20 ಎಕರೆ ಜಮೀನು, ರುಸ್ತುಂಪುರ ಗ್ರಾಪಂ ವ್ಯಾಪ್ತಿಯ 18 ರೈತರ 20 ಎಕರೆ ಜಮೀನು, ಪಾಶ್ಚಾಪುರ ಗ್ರಾಪಂ ವ್ಯಾಪ್ತಿಯ ಗುಮಚನಮರಡಿಯ 55 ರೈತರ 30 ಎಕರೆ ಸವಳು-ಜವಳು ಜಮೀನುಗಳನ್ನು ಸುಧಾರಿಸಲು ಕ್ರಮ ವಹಿಸಲಾಗಿದೆ.

ನರೇಗಾ ಯೋಜನೆಯಡಿ ಶೇ.40ರಷ್ಟು ಕೂಲಿ, ಶೇ.60 ಸಾಮಗ್ರಿ ಅನುಪಾತದಲ್ಲಿ ಯೋಜನೆ ಅನುಷ್ಠಾನವಾಗಲಿದೆ. ಈಗಾಗಲೇ ₹68 ಲಕ್ಷ ವೆಚ್ಚದ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು ಅಂದಾಜು ಪತ್ರಿಕೆ ತಯಾರಿಸಲಾಗಿದೆ. ಈ ಜಲಾವೃತ ಪ್ರದೇಶದ ಸಮೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಇದು ಸಹಜವಾಗಿ ರೈತಾಪಿ ವರ್ಗದಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ.

ನೀರಾವರಿ ಪ್ರದೇಶದಲ್ಲಿ ಅತಿಯಾದ ನೀರಿನ ಬಳಕೆಯಿಂದ ಕೃಷಿ ಭೂಮಿ ಸವಳು-ಜವಳು ಆಗಿ ಬದಲಾಗುತ್ತಿದ್ದು ದಿನದಿಂದ ದಿನಕ್ಕೆ ಸವಳು-ಜವಳು ಬಾಧಿತ ಪ್ರದೇಶ ಹೆಚ್ಚುತ್ತಿದೆ. ಇದರಿಂದ ಲವಣಾಂಶ ಹೆಚ್ಚಿ ಮಣ್ಣು ರಚನೆ ಮತ್ತು ಸತ್ವ ಕಳೆದುಕೊಳ್ಳುತ್ತಿದೆ. ನೀರಿನಾಂಶ ಮೇಲ್ಭಾಗದಲ್ಲೇ ಸಂಗ್ರಹವಾಗುವುದರಿಂದ ಈ ಪ್ರದೇಶದಲ್ಲಿ ಬೆಳೆದ ಬೆಳೆಗಳ ಬೆಳವಣಿಗೆ ಕುಂಠಿತಕ್ಕೆ ಕಾರಣವಾಗುತ್ತಿದೆ.

ಈ ಸಂಗತಿ ಮನಗಂಡಿರುವ ಸರ್ಕಾರ ನರೇಗಾ ಯೋಜನೆಯಡಿ ಮೊಟ್ಟ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸವಳು-ಜವಳು ಬಾಧಿತ ಜಮೀನು ಅಭಿವೃದ್ಧಿಪಡಿಸಲು ಇದೀಗ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ಯೋಜನೆ ಯಶಸ್ವಿ ಅನುಷ್ಠಾನಗೊಂಡಲ್ಲಿ ಬರುವ ದಿನಗಳಲ್ಲಿ ಈ ವಿಶೇಷ ಯೋಜನೆಯನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸುವ ಚಿಂತನೆಯಿದೆ.

ಈಗಾಗಲೇ ಸವಳು-ಜವಳು ಸಮಸ್ಯಾತ್ಮಕ ಜಮೀನುಗಳ ಮಣ್ಣು ಪರೀಕ್ಷೆ ನಡೆಸಲಾಗಿದೆ. ಸವಳು-ಜವಳು ಬಾಧಿತ ಜಮೀನು ಪ್ರದೇಶ ಸುಧಾರಣೆಗೆ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಚರಂಡಿ ಆಕಾರದ ತೆಗ್ಗು ತೆಗೆದು ಮುಖ್ಯ ಮತ್ತು ಉಪಮುಖ್ಯ ಪೈಪ್‌ಗಳನ್ನು ಅಳವಡಿಸುವುದು. ಒಂದೆಡೆ ಚಿಕ್ಕ ತಡೆಗೋಡೆ ನಿರ್ಮಿಸಿ ಮತ್ತೊಂದೆಡೆ ತೆರೆದುಬಿಡುವ ಕಾಮಗಾರಿ ಇದಾಗಿದೆ.

ಉದ್ಯೋಗ ಖಾತರಿ ಯೋಜನೆಯಡಿ ತಾಲೂಕಿನ ನದಿ ಪಾತ್ರದ ಸವಳು-ಜವಳು ಬಾಧಿತ ಜಮೀನುಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಯೋಜನೆ ರೂಪಿಸಲಾಗಿದೆ. ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲು ಎಲ್ಲ ಕ್ರಮ ವಹಿಸಲಾಗಿದೆ ಎಂದು ನರೇಗಾ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆಹುಕ್ಕೇರಿ ತಾಲೂಕಿನ ಮೂರು ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಕ್ಕೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ಸವಳು-ಜವಳು ಬಾಧಿತ ಜಮೀನು ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ.

- ಟಿ.ಆರ್.ಮಲ್ಲಾಡದ, ಇಒ ತಾಪಂ ಹುಕ್ಕೇರಿಹಿರಣ್ಯಕೇಶಿ, ಘಟಪ್ರಭಾ ಮತ್ತು ಮಾರ್ಕಂಡೇಯ ನದಿ ಪಾತ್ರದ ಸವಳು-ಜವಳು ಬಾಧಿತ ಮತ್ತು ಜಲಾವೃತ ಜಮೀನುಗಳನ್ನು ನರೇಗಾ ನೆರವಿನಡಿ ಸುಧಾರಿಸಲಾಗುವುದು. ಈಗಾಗಲೇ ಮಣ್ಣು ಪರೀಕ್ಷೆ ನಡೆಸಿ ಡಿಪಿಆರ್ ಸಿದ್ಧಪಡಿಸಲಾಗಿದೆ.

- ಆರ್.ಬಿ.ನಾಯ್ಕರ, ಸಹಾಯಕ ಕೃಷಿ ನಿರ್ದೇಶಕರು ಹುಕ್ಕೇರಿ