ಸವಣೂರು ಪೊಲೀಸರಿಂದ ಧಾನ್ಯ, ಜಾನುವಾರು ಕಳ್ಳರ ಸೆರೆ

| Published : Mar 17 2025, 12:34 AM IST

ಸವಣೂರು ಪೊಲೀಸರಿಂದ ಧಾನ್ಯ, ಜಾನುವಾರು ಕಳ್ಳರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾ. 8ರಂದು ರಾತ್ರಿ ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಶಂಕ್ರಪ್ಪ ಬಸವಣ್ಣೆಪ್ಪ ದೊಡ್ಡಮನಿ ಎಂಬವರ ಮನೆಯಲ್ಲಿ 18 ಜೋಳದ ಚೀಲ, 2 ಪಾಕೀಟ್ ಗೋದಿ ಸೇರಿದಂತೆ ಸುಮಾರು ₹40 ಸಾವಿರ ಮೌಲ್ಯದ ಧಾನ್ಯಗಳನ್ನು ಕಳ್ಳತನ ಮಾಡಿರುವ ಬಗ್ಗೆ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸವಣೂರು: ಸವಣೂರು, ಬಂಕಾಪುರ, ಶಿಗ್ಗಾಂವಿ, ಹುಲಗೂರ ಹಾಗೂ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಗಳ ವ್ಯಾಪ್ತಿಯ ರೈತರ ಧಾನ್ಯ ಮತ್ತು ಜಾನುವಾರುಗಳನ್ನು ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಸವಣೂರು ಪೊಲೀಸ್ ತಂಡವು ಶನಿವಾರ ಬಂಧಿಸಿ ₹10 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.ಮಾ. 8ರಂದು ರಾತ್ರಿ ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಶಂಕ್ರಪ್ಪ ಬಸವಣ್ಣೆಪ್ಪ ದೊಡ್ಡಮನಿ ಎಂಬವರ ಮನೆಯಲ್ಲಿ 18 ಜೋಳದ ಚೀಲ, 2 ಪಾಕೀಟ್ ಗೋದಿ ಸೇರಿದಂತೆ ಸುಮಾರು ₹40 ಸಾವಿರ ಮೌಲ್ಯದ ಧಾನ್ಯಗಳನ್ನು ಕಳ್ಳತನ ಮಾಡಿರುವ ಬಗ್ಗೆ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಾವೇರಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಬೆಳೆದ ಧಾನ್ಯ ಹಾಗೂ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪತ್ತೆ ಮಾಡಲು ಎಸ್‌ಪಿ ಅಂಶುಕುಮಾರ, ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೊಳ, ಶಿಗ್ಗಾಂವಿ ಡಿಎಸ್‌ಪಿ ಗುರುಶಾಂತಪ್ಪ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಸವಣೂರು ಪಿಐ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.ತನಿಖಾ ತಂಡವು ಆರೋಪಿಗಳಾದ ಶಿಗ್ಗಾಂವಿಯ ದುರ್ಗಪ್ಪ ಗಾಳೆಪ್ಪ ಕೊರವರ, ಗಂಗಾಧರ ಶಂಕ್ರಪ್ಪ ಕೊಕನೂರ, ಮಾಂತೇಶ ದುರ್ಗಪ್ಪ ಗದಗ, ಹುಬ್ಬಳ್ಳಿಯ ಅಮೀತ ದಿಲೀಪ ಗೊಸಾವಿ, ಅಭಿಷೇಕ ಪರಶುರಾಮ ನರೇಗಲ್ ಎಂಬ ಐವರು ಅರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಆರೋಪಿತರಿಂದ ಒಟ್ಟು 54 ಚೀಲ ಜೋಳ, 21 ಚೀಲ ಗೋವಿನಜೋಳ, 30 ಚೀಲ ಸಾವಿ, 5 ಚೀಲ ಸೋಯಾಬಿನ್, 5 ಚೀಲ ಕಡಲೆ, 2 ಚೀಲ ಗೋದಿ ಹಾಗೂ ಕಳ್ಳತನಕ್ಕೆ ಬಳಸಿದ ಬುಲೆರೋ ವಾಹನ ಮತ್ತು ದ್ವಿಚಕ್ರ ವಾಹನ ಸೇರಿದಂತೆ ಸುಮಾರು ₹10 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಪತ್ತೆ ಮಾಡಲು ಸವಣೂರು ಠಾಣೆಯ ಪಿಐ ಆನಂದ ಒಣಕುದ್ರೆ, ಪಿಎಸ್‌ಐಗಳಾದ ಎಂ.ಎಸ್. ದೊಡ್ಡಮನಿ, ಎಸ್.ಕೆ. ಪೊಲೀಸಗೌಡ್ರ ನೇತೃತ್ವದ ತಂಡದಲ್ಲಿ ಬಸವರಾಜ ಲಮಾಣಿ, ಎ.ಎಚ್. ನದಾಫ, ಹಸಮತ್ ತಹಸೀಲ್ದಾರ, ಎಚ್.ಎಫ್. ಬಳ್ಳಾರಿ, ಮಹೇಶ ಎಸ್. ಕೆಲೂರ, ಮಂಜುನಾಥ ಮಣ್ಣಿಯವರ, ರಘು ಚವ್ಹಾಣ, ಪ್ರಕಾಶ ಮ್ಯಾಕಲವರ ಹಾಗೂ ತಾಂತ್ರಿಕ ಸಿಬ್ಬಂದಿ ಸತೀಶ ಮಾರಕಟ್ಟಿ, ಮಾರುತಿ ಹಾಲಬಾವಿ ಒಳಗೊಂಡ ತನಿಖಾ ತಂಡದವರನ್ನು ಎಸ್‌ಪಿ ಅಂಶುಕುಮಾರ ಪ್ರಶಂಶಿಸಿ ಅಧಿಕಾರಿ, ಸಿಬ್ಬಂದಿಗೆ ಬಹುಮಾನ ಘೋಷಿಸಿದ್ದಾರೆ.ಕುಡಿತ ಬಿಡುವಂತೆ ಬುದ್ಧಿಮಾತು ಹೇಳಿದ್ದಕ್ಕೆ ಆತ್ಮಹತ್ಯೆ

ಶಿಗ್ಗಾಂವಿ: ಕುಡಿತದ ಚಟವನ್ನು ಬಿಡುವಂತೆ ಬುದ್ಧಿಮಾತು ಹೇಳಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುನ್ನೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.ಸಂಜೀವ ಮಹಾದೇವಪ್ಪ ಬೀರವಳ್ಳಿ (೨೬) ಮೃತಪಟ್ಟ ವ್ಯಕ್ತಿ. ಈತ ಮದ್ಯವ್ಯಸನಿಯಾಗಿದ್ದ. ಹೀಗಾಗಿ ಕುಡಿತದ ಚಟ ಬಿಡುವಂತೆ ಕುಟುಂಬದವರು ಬುದ್ಧಿಮಾತು ಹೇಳಿದ್ದರು. ಇವರ ಮಾತನ್ನು ಕೇಳದೇ ಸಂಜೀವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.