ಜನಪದ ಸಂಸ್ಕೃತಿ ಉಳಿಸಿ, ಬೆಳೆಸಲು ಮುಂದಾಗಿ

| Published : Aug 29 2024, 12:55 AM IST

ಸಾರಾಂಶ

ಜನಪದ ಸಂಸ್ಕೃತಿ ಮತ್ತು ಪರಂಪರೆಯನ್ನು ಶ್ರೀಮಂತಗೊಳಿಸಿ ಉಳಿಸಿ, ಬೆಳೆಸುವಲ್ಲಿ ಕಾಡುಗೊಲ್ಲರ ಪಾತ್ರ ಹೆಚ್ಚು ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ಶಿರಾ: ಜನಪದ ಸಂಸ್ಕೃತಿ ಮತ್ತು ಪರಂಪರೆಯನ್ನು ಶ್ರೀಮಂತಗೊಳಿಸಿ ಉಳಿಸಿ, ಬೆಳೆಸುವಲ್ಲಿ ಕಾಡುಗೊಲ್ಲರ ಪಾತ್ರ ಹೆಚ್ಚು ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ತಾಲೂಕಿನ ಗೌಡಗೆರೆ ಹೋಬಳಿಯ ಮುದ್ದೇನಹಳ್ಳಿ ಗೊಲ್ಲರಟ್ಟಿ ಗ್ರಾಮದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ 5 ದಶಕಗಳಿಂದ ಅಭಿವೃದ್ಧಿ ಕಾಣದ ಗೊಲ್ಲರಹಟ್ಟಿ ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ. ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಕಾಡುಗೊಲ್ಲ ವಿದ್ಯಾರ್ಥಿಗಳಿಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶ್ರಮಿಸಿದ್ದೇನೆ ಎಂದು ತಿಳಿಸಿದರು.

ಕಾಡುಗೊಲ್ಲ ಸಮಾಜದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡಿಸುವಂತಹ ಕೆಲಸ ಪ್ರತಿಯೊಬ್ಬ ಪೋಷಕರು ಮಾಡಿದಾಗ ಮಾತ್ರ ಸಮಾಜ ಅಭಿವೃದ್ಧಿ ಪಥದತ್ತ ಮುನ್ನಡೆಯಲ್ಲಿದ್ದು, ಸಮುದಾಯದ ಪ್ರಗತಿಗೆ ಭದ್ರ ಬುನಾದಿಯಾಗಲಿದೆ ಎಂದರು.

ರೇಷ್ಮೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಿದರೆ, ಕಾಡುಗೊಲ್ಲ ಸಮುದಾಯದ ಶೈಕ್ಷಣಿಕ ಸಾಧನೆ ಜೊತೆಗೆ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ಎಂದ ಅವರು, ಶ್ರೀ ಕೃಷ್ಣ ಜನ್ಮಾಷ್ಟಮಿಯಂತಹ ಕಾರ್ಯಕ್ರಮಗಳು ಯುವಕರ ಸ್ನೇಹ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಮುಖಂಡ ಜಯರಾಮಣ್ಣ, ಚಿತ್ತಪ್ಪ, ಕರಿಯಣ್ಣ, ಮೂಡ್ಲಪ್ಪ, ಪ್ರಕಾಶ್ ಸೇರಿದಂತೆ ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು ಹಾಗೂ ನಂದ ಗೋಕುಲ ಗೆಳೆಯರ ಬಳಗದ ಯುವಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.