ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಆರೋಗ್ಯಕರ ಬದುಕಿಗಾಗಿ ವೃಕ್ಷದೇವತೆಯನ್ನು ಆರಾಧಿಸಲು ಪ್ರತಿಯೊಬ್ಬರೂ ಮರ- ಗಿಡ ಬೆಳೆಸಿ ಕಾಪಾಡಬೇಕು ಎಂದು ತಾಲೂಕು ವಲಯ ಅರಣ್ಯಾಧಿಕಾರಿ ಎಂ.ವಿ.ಅನಿತಾ ಹೇಳಿದರು.ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ, ಐಡಿಎಫ್‌ಸಿ ಫಸ್ಟ್ ಭಾರತ್ ಬ್ಯಾಂಕ್, ಸಾಮಾಜಿಕ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವನ ಸಂವರ್ಧನೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ಹುಟ್ಟುವ ಮಕ್ಕಳೇ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಹೃದ್ರೋಗ, ಉಸಿರಾಟ ಸಮಸ್ಯೆ, ಶ್ವಾಸಕೋಶದಂತಹ ಸಮಸ್ಯೆಗಳು ಕಾಡುತ್ತಿವೆ. ಶುದ್ಧಗಾಳಿ ಇಲ್ಲದೆ ವಾಯು, ಪರಿಸರ ಮಾಲಿನ್ಯವಾಗುತ್ತಿದೆ. ಕಾಡು ನಾಶದಿಂದ ಭೂ ಸವಕಳಿ, ಪ್ರವಾಹ, ಭೂ ಕುಸಿತ, ಗುಡ್ಡ ಕುಸಿತವಾಗಿ ಸಾವು- ನೋವು ಹೆಚ್ಚುತ್ತಿದೆ. ಎಲ್ಲಕ್ಕೂ ಮದ್ದಾಗಿರುವ ಮರ- ಗಿಡ ಬೆಳೆಸಿ, ಕಾಡು ಉಳಿಸುವ ಪರಿಕಲ್ಪನೆ ಭವಿಷ್ಯದ ಮಕ್ಕಳಲ್ಲಿ ಮೂಡಬೇಕಿದೆ ಎಂದರು.ಐಡಿಎಫ್‌ಸಿ ಬ್ಯಾಂಕ್‌ನ ರಾಜ್ಯ ಮುಖ್ಯ ವ್ಯವಸ್ಥಾಪಕ ಪುಟ್ಟಸ್ವಾಮಿ ಮಾತನಾಡಿ, ನಮ್ಮ ದುರಾಸೆಯಿಂದ ಕಾಡು ನಾಶವಾಗಿ ಕಾಡು ಪ್ರಾಣಿಗಳು ಆಹಾರ, ಜೀವರಕ್ಷಣೆಗಾಗಿ ಜನವಸತಿ ಪ್ರದೇಶಗಳಿಗೆ ನುಗ್ಗಿ ಸಂಘರ್ಷವೇರ್ಪಟ್ಟು, ಜೀವ ವೈವಿಧ್ಯತೆ ಏರುಪೇರಾಗುತ್ತಿದೆ ಎಂದರು.
ಹಸಿರೀಕರಣವಿಲ್ಲದೆ ಓಜೋನ್ ಪದರ ಕಳಚಿ ವಾತಾವರಣ ಬಿಸಿಯಾಗಿ ಕ್ಯಾನ್ಸರ್, ಚರ್ಮವ್ಯಾಧಿ, ಜಲಕ್ಷಾಮ ಉಂಟಾಗುತ್ತಿದೆ. ಹಸಿರು ವನ ನಿರ್ಮಿಸಲು ವಿದ್ಯಾರ್ಥಿಗಳು ಮರ- ಗಿಡ ಬೆಳೆಸಲು ಪ್ರೇರಕ ಶಕ್ತಿಯಾಗಬೇಕು.ನಿಮ್ಮೊಂದಿಗೆ ತಾವಿರುವುದಾಗಿ ನುಡಿದರು.ಶಾಲಾ ಕಾಲೇಜು ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಬ್ಯಾಂಕಿನ ರಾಜ್ಯ ಮುಖ್ಯ ವ್ಯವಸ್ಥಾಪಕ ಪುಟ್ಟಸ್ವಾಮಿ, ಪ್ರಾಂಶುಪಾಲ ದೊರೆಸ್ವಾಮಿ, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಮುಖ್ಯಶಿಕ್ಷಕಿ ಮಮತಾ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಉಪವಲಯ ಅರಣ್ಯಾಧಿಕಾರಿ ರಮೇಶ್, ರಾಘವೇಂದ್ರ, ಪ್ರಮೋದ್, ಶಿವಸಿದ್ದು, ಮಹೇಶ್, ಗಸ್ತು ವನಪಾಲಕರಾದ ಅಭಿಲಾಷ್, ಮಂಜುನಾಥ್, ದಿನೇಶ್, ಪ್ರಶಾಂತ್, ವಾಚರ್ ರವಿಕುಮಾರ್. ಶ್ರೀನಿವಾಸ್, ಶಿಕ್ಷಕರಾದ ಎಸ್.ಎಂ.ಬಸವರಾಜು, ಚಿಮ್ಮಲ್, ಸುರೇಶ್ ಇದ್ದರು.
;Resize=(128,128))
;Resize=(128,128))