ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ದೇಶಾದ್ಯಂತ ಬಿಜೆಪಿ ನೇತೃತ್ವದಲ್ಲಿ ನ.1ರಿಂದ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
- ಕಾಂಗ್ರೆಸ್ ಬಳಸಿ ದೇಶ ಅಸ್ಥಿರಗೊಳಿಸಲು ವಿದೇಶಿ ಶಕ್ತಿಗಳು ಯತ್ನ: ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ದೇಶಾದ್ಯಂತ ಬಿಜೆಪಿ ನೇತೃತ್ವದಲ್ಲಿ ನ.1ರಿಂದ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿ ಶಕ್ತಿಗಳು ಬಾಂಗ್ಲಾ ದೇಶ, ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳಲ್ಲಿ ಅರಾಜಕತೆ ಸೃಷ್ಟಿಸಿ, ಆಡಳಿತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಭಾರತದಲ್ಲೂ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್, ಸಿಜೆಪಿ, ಕಮ್ಯುನಿಷ್ಟರನ್ನು ಬಳಸಿಕೊಳ್ಳುತ್ತಿವೆ ಎಂದರು.
ನ.1ರಂದ ದೇಶಾದ್ಯಂತ ಬಿಜೆಪಿಯಿಂದ ಕೈಗೊಳ್ಳುತ್ತಿರುವ ಅಭಿಯಾನದಡಿ ಜನ ಜಾಗೃತಿ, ಮೆರವಣಿಗೆ, ಪ್ರಬುದ್ಧರ ಗೋಷ್ಠಿ, ಯುವಕರೊಂದಿಗೆ ಸಂವಾದ ಇತ್ಯಾದಿ ಕಾರ್ಯಕ್ರಮ ಸಂಘಟಿಸಲಾಗುವುದು. ದೇಶ, ರಾಜ್ಯದಲ್ಲಿ ಹಲವಾರು ಸಮಸ್ಯೆ ಇದ್ದು, ದೇಶದಲ್ಲಿ ಗಡಿ ಸಮಸ್ಯೆ, ಭಯೋತ್ಪಾದನೆ, ನಕ್ಸಲಿಸಂ ಸಮಸ್ಯೆ ಇದೆ ಎಂದು ಅವರು ಹೇಳಿದರು.ರಾಜ್ಯದಲ್ಲಿ ಬರ ಘೋಷಣೆ ಆಗಿದ್ದರೂ ಇನ್ನೂ ಪರಿಹಾರ ಕಾಮಗಾರಿ ಶುರುವಾಗಿಲ್ಲ. 17 ಷರತ್ತುಗಳಿಗೆ ಒಳಪಟ್ಟು ರಾಜ್ಯ ಸರ್ಕಾರದ ₹2500 ಪರಿಹಾರ ಯಾರಿಗೆ ಸಿಗುತ್ತದೆಯೋ ಗೊತ್ತಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಹಾಲಿನ ದರ ಹೆಚ್ಚಿಸಲಾಗಿದೆ. ದೇಶದ ಅಖಂಡತೆ, ಸಮಗ್ರತೆ ಕಾಪಾಡುವುದು ನಮ್ಮ ಪ್ರಥಮ ಆದ್ಯತೆ. ಇದುವೇ ಅಭಿಯಾನದ ಮೂಲ ಉದ್ದೇಶ ಎಂದರು.
ಕಾಂಗ್ರೆಸ್, ಸಿಜೆಪಿ, ಕಮ್ಯುನಷ್ಟ್ ಹಾಗೂ ವಿದೇಶಿ ಶಕ್ತಿಗಳ ಕೈಗೊಂಬೆ ಆಗಿರುವ ನಗರ ನಕ್ಸಲರು ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಯತ್ನಿಸುತ್ತಿದ್ದಾರೆ. ದೇಶವನ್ನು ಅತಂತ್ರ ಮತ್ತು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನ ತುಕ್ಡೇ ಗ್ಯಾಂಗ್ ಅಧಿಕಾರವಿಲ್ಲದೇ ಹತಾಶಗೊಂಡು, ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಿದೆ. ಅರಾಜಕತೆ ಸೃಷ್ಟಿಸಿ ದೇಶದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಚುನಾವಣೆ ಮೂಲಕವೇ ಗೆದ್ದು ಬನ್ನಿ. ವ್ಯವಸ್ಥೆ ಬಗ್ಗೆ ಜನರಿಗೆ ಅವಿಶ್ವಾಸ ಮೂಡಿಸಬೇಡಿ. ಕಾನೂನು ಬಾಹಿರವಾಗಿ ಪ್ರತಿಭಟನೆ, ಹಿಂಸೆಗೆ ಪ್ರಚೋದನೆ ನೀಡುವುದರಿಂದ ನಿಮಗೆ ಅಧಿಕಾರವಂತೂ ಸಿಗುವುದಿಲ್ಲ ಎಂದು ಹೇಳಿದರು.ನೂತನ ಎಂಎಲ್ಸಿ ಕೆ.ಎಂ.ಸುರೇಶ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಎಂ.ಬಸವರಾಜ ನಾಯ್ಕ, ಎಚ್.ಪಿ.ರಾಜೇಶ, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಧನಂಜಯ ಕಡ್ಲೇಬಾಳು, ಅಣ್ಣೇಶ ಐರಣಿ, ಆರ್.ಲಕ್ಷ್ಮಣ, ಎಸ್.ಟಿ.ವೀರೇಶ, ಎಚ್.ಪಿ.ವಿಶ್ವಾಸ, ಕೆ.ಪ್ರಸನ್ನಕುಮಾರ, ಮಂಜಪ್ಪ ಕಾಕನೂರು, ಶಾಮನೂರು ಹರೀಶ ಇತರರು ಇದ್ದರು.
- - -(ಬಾಕ್ಸ್)
* ನೀವು ಗೆದ್ದಾಗ ಇವಿಎಂ ಸರಿ, ಬಿಜೆಪಿ ಗೆದ್ದಾಗ ಸರಿ ಇರಲ್ವಾ?ದಾವಣಗೆರೆ: ಕೇರಳ, ತೆಲಂಗಾಣ, ಕರ್ನಾಟಕದಲ್ಲಿ ನೀವು ಚುನಾವಣೆ ಗೆದ್ದಾಗ ಇವಿಎಂ ಸರಿ ಇತ್ತಾ? ಬಿಜೆಪಿ ಗೆದ್ದಾಗ ಮಾತ್ರವೇ ಇವಿಎಂ ಸರಿ ಇರುವುದಿಲ್ಲವಾ ಎಂದು ಬಿಜೆಪಿ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಓಟು ಚೋರಿ ಅಂತಾ ದಾಖಲೆ ಇಲ್ಲದೇ ಆರೋಪಿಸುತ್ತೀರಿ. ಇಡಿ, ಸಿಬಿಐ, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆಯೇ ಜನರಲ್ಲಿ ಅವಿಶ್ವಾಸ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನಿಮಗೆ ಸಮಸ್ಯೆ ಇದ್ದರೆ ಸಂಸತ್ತಿನಲ್ಲಿ ಅದರ ಬಗ್ಗೆ ಚರ್ಚೆ ಮಾಡಿ. ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಹೋಗಿ. ಅದನ್ನು ಬಿಟ್ಟು ಕಮ್ಯುನಿಷ್ಟ್ ಪಕ್ಷ, ಕಾಕ್ರೋಚ್ ಪಕ್ಷಗಳ ಜೊತೆಗೆ ಸೇರಿದರೆ ದೇಶದ ಜನತೆ ಸಹಿಸುವುದಿಲ್ಲ. ನಿಮ್ಮಗಳ ಸ್ವಾರ್ಥಕ್ಕಾಗಿ ಇಡೀ ದೇಶಕ್ಕೆ ಅಪಾಯ ತರಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಏಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು? ಸ್ವತಂತ್ರ ಸಂಸ್ಥೆಯಾದ ಚುನಾವಣಾ ಆಯೋಗ ಸರಿಯಾಗಿಯೇ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಎಸ್ಐಆರ್ ನಂತರ ಮತದಾರರ ಪಟ್ಟಿಯಲ್ಲಿ 1 ಕೋಟಿ ಹೆಸರು ಡಿಲೀಟ್ ಆಗಿವೆ. ಹೆಸರು ಡಿಲೀಟ್ ಆಗಿರುವವರಲ್ಲಿ 16 ಲಕ್ಷ ಜನರು ಸಾವನ್ನಪ್ಪಿದ್ದಾರೆ. 65 ಲಕ್ಷ ಜನರು ಶಾಶ್ವತವಾಗಿ ವಲಸೆ ಹೋಗಿದ್ದಾರೆ. ಮತ ಕಳೆದುಕೊಂಡ ಯಾರಾದರೂ ಒಬ್ಬರನ್ನು ಕಾಂಗ್ರೆಸ್ ಕರೆ ತರಲಿ ನೋಡೋಣ ಎಂದು ಸವಾಲು ಹಾಕಿದರು.
ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಜೊತೆ ಕೈ ಜೋಡಿಸಿ, ಅರಾಜಕತೆ ಸೃಷ್ಟಿಸುವ ಪ್ರಯತ್ನ ವಿಫಲಗೊಳಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ರ ಸಂವಿಧಾನವನ್ನು ಎತ್ತಿ ಹಿಡಿಯಲು ಹಾಗೂ 2047ರ ವಿಕಸಿತ ಭಾರತ ಸಾಕಾರಗೊಳಿಸಲು ದೇಶದ ಪ್ರತಿಯೊಬ್ಬರೂ ನರೇಂದ್ರ ಮೋದಿಯವರ ಜೊತೆಗೆ ಸಂಕಲ್ಪ ಮಾಡಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.- - -
-31ಕೆಡಿವಿಜಿ4: -ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.