ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಶತ-ಶತಮಾನಗಳಿಂದಲೂ ಸುತ್ತಮುತ್ತಲ ಹಳ್ಳಿಗಳ ಜನ, ಜಾನುವಾರುಗಳ ದಾಹ ನೀಗಿಸುತ್ತಿದ್ದೇನೆ. ಕಳೆದ 30-40 ವರ್ಷಗಳಿಂದ ರೈತರ ಭೂಮಿಗೆ ನೀರು ಪೂರೈಸುತ್ತಿದ್ದೇನೆ. ಈಗ ಮರಳು ದಂಧೆಕೋರರದಿಂದ ನಾನೇ ಸಂಕಷ್ಟದಲ್ಲಿದ್ದು, ನನ್ನನ್ನು ಯಾರೂ ಸಂರಕ್ಷಣೆ ಮಾಡುತ್ತಿಲ್ಲ.
ಇದು, ಹಿರೇಹಳ್ಳದಲ್ಲಿ ಸುತ್ತಾಡಿದರೆ ಕೇಳಿಬರುವ ಸ್ವಗತ.ನನಗೆ ಶತ-ಶತಮಾನಗಳ ಇತಿಹಾಸವಿದ್ದು 30ಕ್ಕೂ ಹೆಚ್ಚು ಗ್ರಾಮಗಳ ಜನ, ಜಾನುವಾರುಗಳಿಗೆ ಆಸರೆಯಾಗಿದ್ದಾನೆ. ಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ನನ್ನ ಒಡಲು ಬರಿದಾಗುತ್ತಾ ಬಂದಿದೆ. ಆದರೂ ಒಡಲಿನಲ್ಲಿ ಬೋರ್‌ವೆಲ್ ಕೊರೆಸಿಕೊಂಡು ಬೇಸಿಗೆಯಲ್ಲೂ ರೈತರಿಗೆ ನೀರು ನೀಡುತ್ತಿದ್ದೇನೆ. ಹೀಗೆ ನನ್ನ ಬಳಿಸಿಕೊಳ್ಳುತ್ತಿರುವ ರೈತರು ಸಹ ಮರಳು ದಂಧೆಕೋರರಿಂದ ರಕ್ಷಿಸುತ್ತಿಲ್ಲ. ನನ್ನ ಪರ ಗಟ್ಟಿ ಧ್ವನಿ ಎತ್ತುತ್ತಿಲ್ಲ.
ನಾಲ್ಕು ವರ್ಷಗಳ ಹಿಂದೆ ನಶಿಸಿ ಹೋಗುತ್ತಿದ್ದ ನನಗೆ, ಗವಿಸಿದ್ಧೇಶ್ವರ ಶ್ರೀಗಳು ಪುನಶ್ಚೇತನ ನೀಡುವ ಮೂಲಕ ಮರುಜನ್ಮ ನೀಡಿದರು. ನನ್ನ ಇಕ್ಕೆಲಗಳಲ್ಲಿ ಬಂಧಿಸಿದ್ದ ಗಿಡ-ಕಂಟಿ ತೆರವು ಮಾಡಿ ನನ್ನ ಬಿಡುಗಡೆಗೊಳಿಸಿದರು. ನನ್ನನ್ನು ಅತಿಕ್ರಮಿಸಿದವರನ್ನು ಹಿಂದೆ ಸರಿಸಿ, ನನಗೊಂದು ಭದ್ರ ನೆಲೆಯಾಗುವಂತೆ ಮಾಡಿದರು. ಇದರಿಂದ ಮತ್ತೆ ನಾನು ಆದಿಕಾಲದಂತೆ ಕಂಗೊಳಿಸಿದೆ.ಗವಿಸಿದ್ಧೇಶ್ವರ ಶ್ರೀಗಳ ಪಾದಸ್ಪರ್ಶದಿಂದ ಪುನೀತಳಾದ ನಾನು ಮತ್ತೆ ಗತವೈಭವ ಪಡೆದೆ. ನನ್ನ ಎರಡು ಬದಿಯ 26 ಕಿಲೋ ಮೀಟರ್ ಉದ್ದಕ್ಕೂ ರೈತರು ಪಂಪ್‌ಸೆಟ್ ಮೂಲಕ ಜಮೀನಿಗೆ ನೀರು ಹರಿಸಿಕೊಂಡು ಆರ್ಥಿಕವಾಗಿ ಸದೃಢರಾದರು. ನನ್ನನ್ನು ತಡೆದು ನಿಲ್ಲಿಸಲು ಅಲ್ಲಲ್ಲಿ ಬ್ಯಾರೇಟ್ ನಿರ್ಮಿಸಿ ತಡೆಹಿಡಿದರು. ಈ ಮೂಲಕ ಬೇಸಿಗೆಯಲ್ಲೂ ಹತ್ತಾರು ಗ್ರಾಮಗಳ ಜನ, ಜಾನುವಾರು, ಕಾಡು ಪ್ರಾಣಿ-ಪಕ್ಷಿಗಳ ದಾಹ ತೀರಿಸುತ್ತಿದ್ದೇನೆ. ಇಷ್ಟಾದರೂ ನನ್ನನ್ನು ಈ ಮರಳು ದಂಧೆಕೋರರಿಂದ ಯಾರು ಕಾಪಾಡುತ್ತಿಲ್ಲ. ಆಡಳಿತವೂ ನನ್ನ ನೆರವಿಗೆ ಬರುತ್ತಿಲ್ಲ.
ಸರ್ಕಾರವೂ ಇಂಥದ್ದೊಂದು ಅಕ್ರಮ ಮರಳು ದಂಧೆಯ ಮೇಲೆ ಕಡಿವಾಣ ಹಾಕಿ, ನದಿಯಂತಿರುವ ನನ್ನನ್ನು ರಕ್ಷಿಸುತ್ತಿಲ್ಲ. ನಾನು ಯಾರ ಬಳಿ ಅಳಲು ತೋಡಿಕೊಳ್ಳಲಿ, ನನ್ನನ್ನು ಸದ್ಬಳಕೆ ಮಾಡಿಕೊಂಡು ರೈತರು ಸಹ ನನ್ನ ಪರವಾಗಿ ಧ್ವನಿ ಎತ್ತಿ, ನನ್ನನ್ನು ಸಂರಕ್ಷಣೆ ಮಾಡುತ್ತಿಲ್ಲ. ನನ್ನ ಒಡಲು ಬಗೆಯುತ್ತಿರುವ ಜೆಸಿಬಿಗಳು, ಮರಳು ಎತ್ತುವ ಯಂತ್ರ, ಟಿಪ್ಪರ್‌ಗಳ ಸದ್ದು ಯಾರ ಕಿವಿಗೂ ಬೀಳುತ್ತಿಲ್ಲ. ನೀವು ನನ್ನ ರಕ್ಷಣೆ ಬರದಿದ್ದರೆ ಮುಂದೊಂದು ದಿನ ನಿಮಗೆ ನಾನು ಬೇಕು ಅಂದರೂ ಸಿಗುವುದಿಲ್ಲ. ನನ್ನ ಒಡಲು ಬಗೆದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ದುರುಳರಿಗೆ ಅವರ ದಾಹ ತೀರಿಸಿದ್ದು ನಾನೇ ಎಂಬ ಅರಿವಿಲ್ಲವೇ? ತಾಯಿಯ ಎದೆ ಹಾಲಿನಿಂತೆ ಜೀವಜಲ ನೀಡಿದ ತಾಯಿಯನ್ನೇ ನಾಶ ಮಾಡಲು ಹೋಗುತ್ತಿರುವ ನಿಮಗೆ ಮುಂದೊಂದು ತಕ್ಕ ಪಾಠ ಕಲಿಸುವೆ. ಕಂದಾಯ ಇಲಾಖೆಯ ಅಧಿಕಾರಿಗಳೇ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ, ಹಿರೇಹಳ್ಳ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲವೇ? ಬಂದರೂ ಯಾಕೆ ಕ್ರಮವಹಿಸುತ್ತಿಲ್ಲ ಎನ್ನುವುದು ಮಾತ್ರ ಪರಿಸರಪ್ರೇಮಿಗಳ ಯಕ್ಷಪ್ರಶ್ನೆಯಾಗಿದೆ.