ವಿಶೇಷ ಯೋಜನೆ ಪ್ರಕಟಿಸಲು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆಗೆ ಮನವಿಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಪಂಚಾಯತ್‌ ಅಡಿಯಲ್ಲಿನ ರಾಜ್ಯದ 15 ಸಾವಿರ ಸಾಮಾಜಿಕ ಅರಣ್ಯ ವನಗಳ ಸಂರಕ್ಷಣೆ, ಸುಮಾರು ಒಂದು ಲಕ್ಷ ಎಕರೆ ಮೇಲ್ಪಟ್ಟು ಇರುವ ಸಾಮಾಜಿಕ ಅರಣ್ಯ ವನಗಳ ಭೂಮಿ ಉಳಿಸಲು ವಿಶೇಷ ಯೋಜನೆಗಳನ್ನು ರಾಜ್ಯ ಸರ್ಕಾರ ಪ್ರಕಟಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಜೊತೆ ಸಮಾಲೋಚನೆ ನಡೆಸಿ ವೃಕ್ಷಲಕ್ಷ ಆಂದೋಲನದ ತಂಡ ಮನವಿ ಸಲ್ಲಿಸಿತು.

ಸಾಮಾಜಿಕ ಅರಣ್ಯ ಸಂರಕ್ಷಣಾ ಅಭಿಯಾನವನ್ನು ವೃಕ್ಷಲಕ್ಷ ಆಂದೋಲನ ನಡೆಸುತ್ರಿದ್ದು, ಬೆಂಗಳೂರಿನಲ್ಲಿ ವೃಕ್ಷ ನಿಯೊಗ ಸಚಿವ ಈಶ್ವರ ಖಂಡ್ರೆ ಸೇರಿದಂತೆ ರಾಜ್ಯ ಅರಣ್ಯ ಕಾರ್ಯದರ್ಶಿ ಮನೋಜ್ ಕುಮಾರ್, ಅರಣ್ಯಾಧಿಕಾರಿ ಪಿಸಿಸಿಎಫ್ ಮೀನಾಕ್ಷಿ ನೇಗಿ, ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಸಂತೋಷ ಕುಮಾರ್ ಅವರಿಗೆ ಹತ್ತು ಅಂಶಗಳ ವಿಶೇಷ ಶಿಫಾರಸು ನೀಡಿದೆ.

ವೃಕ್ಷ ಲಕ್ಷ ಆಂದೋಲನ ಸಂಘಟನೆ ಕಳೆದ 40 ವರ್ಷಗಳಿಂದ ಮಲೆನಾಡಿನ ಅರಣ್ಯ ಗ್ರಾಮೀಣ ಸುಸ್ಥಿರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಸರ್ಕಾರದ ಸಾಮಾಜಿಕ ಅರಣ್ಯ ನಿರ‍್ಮಾಣ, ಜನಜಾಗೃತಿ ಕಾರ್ಯಗಳಲ್ಲಿ ಸದಾ ಪಾಲ್ಗೊಂಡಿದೆ. ಇದೀಗ ಸಾಮಾಜಿಕ ಅರಣ್ಯಸಂರಕ್ಷಣಾ ಅಭಿಯಾನವನ್ನು ನಡೆಸುತ್ತಿದೆ. ವನಗಳ ಪರಿಸ್ಥಿತಿ ಅವಲೋಕನ ನಡೆಸಿದ್ದೇವೆ. ಕಂದಾಯ ಪಂಚಾಯತ ರಾಜ್ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದೇವೆ. ತಳಮಟ್ಟದಲ್ಲಿ ಜನ ಜಾಗೃತಿಗೆ ಮುಂದಾಗಿದ್ದೇವೆ ಎಂದ ತಂಡ ಈ ಕೆಳಗಿನ ಶಿಫಾರಸುಗಳನ್ನು ಒತ್ತಿ ಹೇಳಿದೆ.

ವೃಕ್ಷಲಕ್ಷ ಆಂದೋಲನದ ಶಿಫಾರಸು:


ಸಾಮಾಜಿಕ ಅರಣ್ಯಗಳು ನಿರ್ವಹಣೆ ಇಲ್ಲದೇ ಅನಾಥವಾಗದಂತೆ ಸರ್ಕಾರ ನೇರ ಜವಾಬ್ದಾರಿ ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಪಂಚಾಯತ ರಾಜ್ ಇಲಾಖಾ ಅಧಿಕಾರಿಗಳ ಜಂಟಿ ಕ್ರಮ ಬಹಳ ಮುಖ್ಯವಾಗಿದೆ ಎಂದು ತಿಳಿಸಿದೆ.

ಸಾಮಾಜಿಕ ಅರಣ್ಯ ಇಲಾಖೆಯನ್ನು ಬಲಪಡಿಸುವ ಜರೂರ ಅವಶ್ಯಕತೆ ಇದೆ. ಸಿಬ್ಬಂದಿ ಬೇಕು, ಅನುದಾನ ಬೇಕು. ಸಾಮಾಜಿಕ ಅರಣ್ಯ ವನಗಳ (ನೆಡುತೋಪು) ಗಡಿ ಕಂದಕಗಳು ಭಾಗಶಃ ಮುಚ್ಚಿವೆ. ಕೆಲವೆಡೆ ನೆಡುತೋಪು ಕಟಾವು ಆಗಿಲ್ಲ. ಕಾವಲುಗಾರರು ಇಲ್ಲ. ನಾಮಫಲಕ ಇಲ್ಲ. ಈ ಎಲ್ಲ ತುರ್ತು ಸಂರಕ್ಷಣಾ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದೆ.

ಈ ಹಿಂದೆ ಸಾಮಾಜಿಕ ಅರಣ್ಯಗಳು, ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಬೇಕು ಎಂದೇ ನಿಶ್ಚಯಿಸಲಾಗಿತ್ತು. ನಂತರ ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಪರಿಭಾವಿತ-ಡೀಮ್ಡ್ ಅರಣ್ಯ ಪಟ್ಟಿಗೆ ಸೇರಬೇಕು ಎಂದೇ ಆದೇಶಿಸಲಾಗಿತ್ತು. ರಾಜ್ಯದಲ್ಲಿ ಇದೀಗ ಪುನಃ 4ನೇ ಬಾರಿಗೆ ಡೀಮ್ಡ್‌ ಅರಣ್ಯ ಪಟ್ಟಿ ಜಂಟಿ ಪರಿಷ್ಕರಣೆ ನಡೆಯುತ್ತಿದೆ! ಈಗ ಜಿಲ್ಲಾ ಡೀಮ್ಡ್ ಅರಣ್ಯ ಪಟ್ಟಿ ಅಖೈರುಗೊಳಿಸುವಾಗ ಕಡ್ಡಾಯವಾಗಿ ಸಾಮಾಜಿಕ ಅರಣ್ಯ ನೆಡುತೋಪುಗಳನ್ನು ಡೀಮ್ಡ್‌ ಅರಣ್ಯ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಭೂ ದಾಖಲೆ- ಪಹಣೆ ಪತ್ರಿಕೆಯಲ್ಲಿ 11 ನೇ ಕಾಲಂನಲ್ಲಿ ಸಾಮಾಜಿಕ ಅರಣ್ಯ ವನ ಎಂದು ನಮೂದಿಸಬೇಕು. ಪಶ್ಚಿಮ ಘಟ್ಟದಲ್ಲಿ ಸಾಮಾಜಿಕ ಅರಣ್ಯಗಳಲ್ಲಿ ನೈಸರ್ಗಿಕ ಸಸ್ಯ ಸಮೂಹ ತುಂಬಿ ಕಾಡಿನ ಸ್ವರೂಪ ಬಂದಿದೆ. ಇದು ಉತ್ತಮ ಬೆಳವಣಿಗೆ. ಈ ಕುರಿತು ಅರಣ್ಯ ಇಲಾಖೆ ಜೀವವೈವಿಧ್ಯ ಮಂಡಳಿ ಜೊತೆ ಸಮೀಕ್ಷೆ ಅಧ್ಯಯನ ನಡೆಸಬೇಕು ಎಂದು ಆಗ್ರಹಿಸಿದೆ.

ಮನ್‌ರೇಗಾ ಯೋಜನೆ ಸೇರಿದಂತೆ ಪಂಚಾಯತ ರಾಜ್ಯ ಇಲಾಖೆ ಶೇ.20 ಅನುದಾನ ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ಸರ್ಕಾರ ಮೀಸಲಿಡಬೇಕು. ಶಾಲಾವನ, ಪವಿತ್ರ ವನ, ದೇವರಕಾಡು ಯೋಜನೆಗಳನ್ನು ಸರ್ಕಾರ ಪುನಃ ಪ್ರಾರಂಭಿಸಬೇಕು. ರಾಜ್ಯದ ಎಲ್ಲ ಸಾಮಾಜಿಕ ಅರಣ್ಯವನಗಳ ಸಮೀಕ್ಷೆ ಆಗಬೇಕು. ಈ ವನಗಳ ಗಡಿ ಕಂದಕ ರಿಪೇರಿ ಕಾರ್ಯ, ಖಾಲಿ ಇದ್ದಲ್ಲಿ ವನೀಕರಣ, ಆಗಬೇಕು. ರಾಜ್ಯ ಅರಣ್ಯ ಇಲಾಖೆ ಮತ್ತು ಪಂಚಾಯಿತಿ ರಾಜ್ ಇಲಾಖೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದೆ.

ನಿಯೋಗದ ನೇತೃತ್ವವನ್ನು ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ವಹಿಸಿದ್ದರು.

ನಿಯೋಗದಲ್ಲಿ ಕೆ. ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ, ಕೆ.ಗಣಪತಿ, ಬಾಲಚಂದ್ರ ಸಾಯಿಮನೆ ಮತ್ತಿತರರು ಇದ್ದರು. ಕೋಟ್‌....

ರಾಜ್ಯದಲ್ಲಿನ ಸಾಮಾಜಿಕ ವನ ಸಮಿಕ್ಷೆ ನಡೆಸುತ್ತೇವೆ, ಸಾಮಾಜಿಕ ಅರಣ್ಯ ಅಭಿವೃದ್ಧಿ ಕುರಿತು ವಿಶೇಷ ಯೋಜನೆ ರೂಪಿಸುತ್ತೇವೆ. ಸಾಮಾಜಿಕ ಅರಣ್ಯ ವಿಭಾಗವನ್ನು ಕೂಡ ಬಲಪಡಿಸುತ್ತೇವೆ.

ಈಶ್ವರ ಖಂಡ್ರೆ ಗ್ರಾಮೀಣಾಭಿವೃದ್ಧಿ ಸಚಿವ. ಪೊಟೋ: 24ಎಸ್‌ಎಂಜಿಕೆಪಿ04