ರಾಜ್ಯಪಾಲರ ಹುದ್ದೆ ರದ್ದುಪಡಿಸಿ

| Published : Aug 30 2024, 01:06 AM IST

ಸಾರಾಂಶ

ಸಂವಿಧಾನ ಬದ್ಧ ಒಕ್ಕೂಟ ವ್ಯವಸ್ಥೆ ಉಳಿಸಲು, ರಾಜ್ಯದ ಸ್ವಾಯತ್ತ ಅಧಿಕಾರದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ನಿಲ್ಲಿಸಲು

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯಪಾಲರ ಹುದ್ದೆಯನ್ನು ರದ್ದುಪಡಿಸಿ ಒಕ್ಕೂಟ ವ್ಯವಸ್ಥೆ ಉಳಿಸಿ ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.ಕರ್ನಾಟಕದ ರಾಜಕೀಯ ಬೆಳವಣಿಗೆ ಗಮನಿಸಿದರೆ, ಜನತಂತ್ರ ವ್ಯವಸ್ಥೆಯಲ್ಲಿ ಜನರಿಂದ ಬಹುಮತದಿಂದ ಆಯ್ಕೆಯಾದ ಸರ್ಕಾರವನ್ನು ಕೇಂದ್ರ ಸರ್ಕಾರ ತಾನು ನೇಮಿಸಿದ ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರವನ್ನೇ ಅಸ್ತಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಬಿಜೆಪಿಯ ಈ ಕುಟಿಲ ನೀತಿ ಬಹಿರಂಗವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಎಂಡಿಎ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ವೇಳೆ ರಾಜ್ಯಪಾಲರ ಕಚೇರಿ ರಾಜಕೀಯ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟ. ರಾಜ್ಯಪಾಲರ ಕಚೇರಿಗೆ ಲೋಕಾಯುಕ್ತ ಸಂಸ್ಥೆ ಇತರೆ ಪ್ರಕರಣಗಳಲ್ಲಿ ತನಿಖೆಗೆ ಅನುಮತಿ ಕೇಳಿ ವರ್ಷಗಳೇ ಕಳೆದರೂ ಅವುಗಳ ಬಗ್ಗೆ ತೀರ್ಮಾನ ಮಾಡದ ರಾಜ್ಯಪಾಲರು, ಎಂಡಿಎ ಪ್ರಕರಣದಲ್ಲಿ ತೆಗೆದುಕೊಂಡ ತೀರ್ಮಾನ ಪೂರ್ಣ ರಾಜಕೀಯ ಪ್ರೇರಿತ ಎಂದು ಅವರು ದೂರಿದರು.ಸಂವಿಧಾನ ಬದ್ಧ ಒಕ್ಕೂಟ ವ್ಯವಸ್ಥೆ ಉಳಿಸಲು, ರಾಜ್ಯದ ಸ್ವಾಯತ್ತ ಅಧಿಕಾರದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ನಿಲ್ಲಿಸಲು, ಬಿಜೆಪಿ ಮತ್ತು ಆರ್.ಎಸ್.ಎಸ್ ಚಿಂತನೆಯನ್ನು ರಾಜ್ಯಪಾಲರ ಮೂಲಕ ಜಾರಿಗೊಳಿಸುವ ಹುನ್ನಾರ ತಪ್ಪಿಸಲು, ರಾಜ್ಯಪಾಲ ಹುದ್ದೆ ರದ್ಧತಿಗೆ ಒತ್ತಾಯಿಸಿ, ರಾಜ್ಯಪಾಲ ಹುದ್ದೆ ರದ್ದುಮಾಡಿ, ಒಕ್ಕೂಟ ವ್ಯವಸ್ಥೆ ಉಳಿಸಿ ಎಂಬ ಘೋಷಣೆ ಕೂಗಿ ಪ್ರತಿಭಟಿಸಿದರು.ಪ್ರತಿಭಟನೆಯಲ್ಲಿ ಸಿಪಿಐನ ಕಾರ್ಯದರ್ಶಿ ಎಚ್.ಬಿ. ರಾಮಕೃಷ್ಣ ಮತ್ತು ಸಹ ಕಾರ್ಯದರ್ಶಿ ಸೋಮರಾಜೇ ಅರಸ್ ಮೊದಲಾದವರು ಇದ್ದರು.