ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ತಾಲೂಕು ಸವಿತಾ ಸಮಾಜದ ಸಹಯೋಗದಲ್ಲಿ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಶ್ರೀ ಸವಿತಾ ಮಹರ್ಷಿ ಜಯಂತಿ ದಿನಾಚರಣೆ
ಪುತ್ತೂರು: ಮಾನವ ಜನಾಂಗದ ಅಂಕು -ಡೊಂಕುಗಳನ್ನು ಸರಿಪಡಿಸಲು ಶ್ರಮಿಸಿದ ಸವಿತಾ ಮಹರ್ಷಿಯಂತಹ ಸಾಧಕರು ಮಾನವ ಕುಲಕ್ಕೆ ಅದ್ಭುತ ಸಂದೇಶ ನೀಡಿದವರು. ಅವರ ಆದರ್ಶ ಸಂದೇಶಗಳನ್ನು ಎಲ್ಲ ಸಮಾಜದವರು ಪಾಲನೆ ಮಾಡಬೇಕು ಎಂದು ಪುತ್ತೂರು ತಹಸೀಲ್ದಾರ್ ಎಸ್.ಬಿ. ಕೂಡಲಗಿ ಹೇಳಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ತಾಲೂಕು ಸವಿತಾ ಸಮಾಜದ ಸಹಯೋಗದಲ್ಲಿ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಶ್ರೀ ಸವಿತಾ ಮಹರ್ಷಿ ಜಯಂತಿ ದಿನಾಚರಣೆಯಲ್ಲಿ ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡಿದರು.ಸಂಸ್ಮರಣಾ ಉಪನ್ಯಾಸ ನೀಡಿದ ತಾಲೂಕು ಕಚೇರಿ ಸಿಬಂದಿ ಶ್ರೀಕಲಾ, ಪವಿತ್ರ ಗಾಯತ್ರಿ ಮಂತ್ರದ ತಂದೆ ಸವಿತಾ ಮಹರ್ಷಿಯವರು. ಸೂರ್ಯನ ಅಂಶವೇ ಆಗಿರುವ ಮಹರ್ಷಿಗಳು ನಮ್ಮ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ತಾಲೂಕು ಸವಿತಾ ಸಮಾಜ ಸಂಘದ ಅಧ್ಯಕ್ಷ ಪ್ರವೀಣ್ ಬಂಡಾರಿ ಸಂಪ್ಯ ಮಾತನಾಡಿ, ಸಂಘಕ್ಕೆ ಸಮುದಾಯ ಭವನ ನಿರ್ಮಿಸಲು ಸ್ವಂತ ಜಾಗ ಮಾಡಿ ಕೊಡಬೇಕು ಎಂದು ವಿನಂತಿಸಿದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಉಪ ತಹಸೀಲ್ದಾರ್ ಸುಲೋಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜಾಗಕ್ಕೆ ಮನವಿಸವಿತಾ ಸಮಾಜ ಸಂಘದ ಮಾಜಿ ಅಧ್ಯಕ್ಷ ರಮೇಶ್ ಭಂಡಾರಿ ಮೊದಲಾದವರು ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಒದಗಿಸಿಕೊಡುವಂತೆ ತಹಸೀಲ್ದಾರ್‌ಗೆ ಮನವಿ ಮಾಡಿದರು. ತಹಸೀಲ್ದಾರ್ ಉತ್ತರಿಸಿ ನಗರದಲ್ಲಿ ಜಾಗ ಇಲ್ಲ. ಗ್ರಾಮಾಂತರ ಭಾಗದಲ್ಲಿ ಸರಕಾರಿ ಜಾಗ ಗುರುತಿಸಿ ಹೇಳಿದರೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ತಾಲೂಕು ಕಚೇರಿಯ ಡಿ.ಟಿ. ದಯಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.