ಸಾರಾಂಶ
ಶಿವನ ದಿವ್ಯದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿದ್ದರಿಂದಲೇ ಚತುರ್ವೇದಗಳಲ್ಲೊಂದಾದ ಸಾಮವೇದವನ್ನು ಬರೆಯಲು ಸಾಧ್ಯವಾಯಿತು. ಅಂತಹ ಮಹಾನ್ ವ್ಯಕ್ತಿಯ ಸಾಧನೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಶಿವನ ದಿವ್ಯದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿದ್ದರಿಂದಲೇ ಚತುರ್ವೇದಗಳಲ್ಲೊಂದಾದ ಸಾಮವೇದವನ್ನು ಬರೆಯಲು ಸಾಧ್ಯವಾಯಿತು. ಅಂತಹ ಮಹಾನ್ ವ್ಯಕ್ತಿಯ ಸಾಧನೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ತಾಲೂಕು ಕಚೇರಿಯ ಶಿರಸ್ತೇದಾರ್ ಎಚ್.ಎಸ್.ಉಮೇಶ್ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಮತ್ತು ಕಾಯಕ ಶರಣರ ಜಯಂತಿಯಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಪ್ರತಿಯೊಂದು ಸಮುದಾಯವನ್ನು ಗೌರವಿಸಿ ಆದರ್ಶ ವ್ಯಕ್ತಿಗಳ ತತ್ವವನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ಸಲುವಾಗಿ ರಾಜ್ಯ ಸರ್ಕಾರ ಹಲವು ಮಹನೀಯರ ಜಯಂತಿ ಆಚರಣೆಗೆ ತಂದಿದೆ. ಮಹಾನ್ ವ್ಯಕ್ತಿಗಳ ತತ್ವ, ಸಂದೇಶಗಳು ಸರ್ವಕಾಲಿಕವಾಗಿದ್ದು, ಅದರ ಕೆಲ ಭಾಗವನ್ನಾದರೂ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.ಸವಿತಾ ಸಮಾಜ ಸೇರಿದಂತೆ ಎಲ್ಲ ವರ್ಗದ ಜನರು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದಿಂದ ಸ್ವಾವಲಂಬಿ ಬದುಕಿನೊಂದಿಗೆ ಆರ್ಥಿಕವಾಗಿ ಸದೃಢವಾಗಬಹುದು. ತಾನು ಮಾಡುವ ಯಾವುದೇ ಕಸುಬಿನ ಮೇಲೆ ಗೌರವ ನಿಷ್ಟೆ ಇಟ್ಟುಕೊಂಡಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಜಗದೀಶ್ ಮಾತನಾಡಿ, ಸವಿತಾ ಮಹರ್ಷಿಗಳು ಜಾತಿ ತಾರತಮ್ಯದ ಬಗ್ಗೆ ಹೊರಾಟ ನಡೆಸಿದ ಮಹಾನ್ ವ್ಯಕ್ತಿ. ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡಲ್ಲಿ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು.ಈ ವೇಳೆ ಚುನಾವಣೆ ಶಿರಸ್ತೇದಾರ್ ಚಂದ್ರಶೇಖರ್, ಕಂದಾಯ ಇಲಾಖೆ ಸಿಬ್ಬಂದಿ, ಸಮಾಜದ ಮುಖಂಡರಾದ ಉಮೇಶ್, ಶಿವಲಿಂಗಯ್ಯ, ಮುಕುಂದ, ರವಿಕುಮಾರ್, ಸೇರಿದಂತೆ ಹಲವರು ಇದ್ದರು.