ಹೊಸ ಆವಿಷ್ಕಾರಗಳನ್ನು, ಆಧುನಿಕ ವೃತ್ತಿಕೌಶಲ್ಯವನ್ನು ಅಳವಡಿಸಿಕೊಂಡು, ಗ್ರಾಹಕರ ಅಭಿರುಚಿಯನ್ನು ಅರಿತು ಸವಿತಾ ಸಮಾಜದವರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಹೊಸ ಆವಿಷ್ಕಾರಗಳನ್ನು, ಆಧುನಿಕ ವೃತ್ತಿಕೌಶಲ್ಯವನ್ನು ಅಳವಡಿಸಿಕೊಂಡು, ಗ್ರಾಹಕರ ಅಭಿರುಚಿಯನ್ನು ಅರಿತು ಸವಿತಾ ಸಮಾಜದವರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.ಮಂಗಳವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾ ಸವಿತಾ ಸಮಾಜ ಯುವ ಪಡೆ ಆಯೋಜಿಸಿದ್ದ ಆಧುನಿಕ ಕ್ಷೌರಿಕ ಉಪಕರಣಗಳ ಬಳಕೆ ಮತ್ತು ಅದರ ಲಾಭಗಳು ಕುರಿತು ಒಂದು ದಿನದ ವೃತ್ತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ಸ್ಪರ್ಧಾತ್ಮಕತೆಯ ಈ ದಿನಗಳಲ್ಲಿ ಯಾವ ವೃತ್ತಿಯೂ ಶಾಶ್ವತ ಎನ್ನುವಂತಿಲ್ಲ, ವೃತ್ತಿಕೌಶಲ್ಯ ಹೊಂದದಿದ್ದರೆ ಬೇರೆಯವರು ಈ ವೃತ್ತಿಯನ್ನು ಆಕ್ರಮಿಸಿಕೊಳ್ಳುವ ಅಪಾಯವಿದೆ. ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬಂದು ತಲೆ ಎತ್ತಿ ಬಾಳುವ ರೀತಿಯಲ್ಲಿ ಉನ್ನತ ಸ್ಥಾನದಲ್ಲಿರಬೇಕು ಎಂದು ಆಶಿಸಿದರು. ಸವಿತಾ ಸಮಾಜ ಯುವ ಪಡೆಯವರು ಇಂದು ವೃತ್ತಿ ಕೌಶಲ್ಯ ತರಬೇತಿ ಕಾರ್ಯಾಗಾರ ಏರ್ಪಡಿಸುವ ಮೂಲಕ ಸಮಾಜಕ್ಕೆ ನೆರವಾಗುವಂತಹ ಕೆಲಸ ಮಾಡುತ್ತಿದ್ದಾರೆ. ಯಾವುದೇ ವೃತ್ತಿ ಯಶಸ್ಸಿಯಾಗಿ ಮುನ್ನಡೆಯಲು ಕಾಲಕ್ಕೆ ತಕ್ಕಂತೆ ಆಧುನಿಕತೆಯ ಕೌಶಲ್ಯ ಅಳವಡಿಸಿಕೊಳ್ಳಬೇಕು ಎಂದು ಶಾಸಕರು ಹೇಳಿದರು.

ಜಿಲ್ಲಾ ಸವಿತಾ ಸಮಾಜ ಯುವ ಪಡೆಯ ಜಿಲ್ಲಾಧ್ಯಕ್ಷ ಕಟ್ ವೆಲ್ ರಂಗನಾಥ್ ಮಾತನಾಡಿ, ಸವಿತಾ ಸಮಾಜದವರು ಕೀಳರಿಮೆಪಡುವ ಅಗತ್ಯವಿಲ್ಲ, ಎಲ್ಲಾ ಸಮಾಜದವರಿಗೂ ಬೇಕಾದ ಶ್ರೇಷ್ಠ ವೃತ್ತಿ ನಮ್ಮದು. ಆದರೆ, ನಾವು ವೃತ್ತಿ ನೈಪುಣ್ಯತೆ ಸಾಧಿಸಬೇಕು. ಅದಕ್ಕಾಗಿ ತಕ್ಕ ಕೌಶಲ್ಯ ತರಬೇತಿ ಪಡೆಯಬೇಕು ಎನ್ನುವ ಕಾರಣಕ್ಕೆ ಈ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿರುವುದಾಗಿ ಹೇಳಿದರು.

ಸಮಾಜದ ಮುಖಂಡ, ಸಂಘ ಪರಿವಾರದ ವಿಭಾಗ ಸಂಚಾಲಕ ನಾಗೇಂದ್ರ ಪ್ರಸಾದ್ ಮಾತನಾಡಿ, ದಲಿತ ಸಮಾಜ, ಹಿಂದುಳಿದ ಸಮಾಜ, ಚಿಕ್ಕ ಸಮಾಜ ಎನ್ನುವ ಬದಲು ನಾವೆಲ್ಲಾ ಹಿಂದೂ ಸಮಾಜ ಎಂಬ ಭಾವನೆಯಲ್ಲಿ ಒಂದಾಗಬೇಕು. ನಮ್ಮ ಸಮಾಜಗಳ ಎಲ್ಲಾ ಕುಲಕಸುಬುಗಳು ಸಮಾಜದ ಬೆಳವಣಿಗೆಗೆ ಒಂದಕ್ಕೊಂದು ಪೂರಕವಾಗಿವೆ ಹಾಗೂ ಭಾವೈಕ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ತಿಳಿಸಿದರು.ಮುಖಂಡ ನಾಮದೇವ್ ನಾಗರಾಜ್ ಮಾತನಾಡಿ, ನಮ್ಮ ಸವಿತಾ ಸಮಾಜದವರು ತಮ್ಮ ಸಲೂನ್‌ಗಳನ್ನು ಆಧುನಿಕ ಹಾಗೂ ಆಕರ್ಷಣೀಯಗೊಳಿಸಬೇಕು. ಬದಲಾಗುತ್ತಿರುವ ಗ್ರಾಹಕರ ಅಭಿರುಚಿ ತಿಳಿದು ಹಾಗೂ ಆಧುನಿಕತೆಯ ಕೇಶವಿನ್ಯಾಸವನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು. ಮುಖ್ಯವಾಗಿ ನಾವೆಲ್ಲರೂ ರಾಷ್ಟ್ರೀಯ ಚಿಂತನೆ ಇಟ್ಟುಕೊಂಡು ಬೆಳೆಯಬೇಕು ಎಂದರು.ಆಧುನಿಕ ಕ್ಷೌರಿಕ ಉಪಕರಣಗಳ ಬಳಕೆ ಮತ್ತು ಅದರ ಲಾಭಗಳು ಕುರಿತ ಕಾರ್ಯಾಗಾರವನ್ನು ಕಡೂರು ರವಿಕುಮಾರ್ ಹಾಗೂ ನಾಮದೇವ್ ನಾಗರಾಜ್ ನಡೆಸಿಕೊಟ್ಟರು.ಸಮಾಜದ ಮುಖಂಡರಾದ ಎ.ಎಸ್.ಸುರೇಶ್, ಲಕ್ಷ್ಮೀನಾರಾಯಣ, ಎನ್.ರಮೇಶ್, ಎ.ಆರ್. ಉಮೇಶ್, ದೇವರಾಜು, ಧನಂಜಯ, ಟೂಡಾ ಮಾಜಿ ಸದಸ್ಯ ಟಿ.ಸಿ.ಪ್ರಭಾಕರ್, ಮುಖಂಡರಾದ ಒ.ಕೆ. ರಾಜು, ಮುಕುಂದರಾಜು, ಕಣಮರಾಜು, ಅಣ್ಣಪ್ಪ ಮೊದಲಾದವರು ಭಾಗವಹಿಸಿದ್ದರು.